ADVERTISEMENT

ಲೈಂಗಿಕ ಕಿರುಕುಳ ಆರೋಪ: ಬಾಲಕಿಯ ತಂದೆಯನ್ನು ಹತ್ಯೆಗೈದ ಆರೋಪಿ

ಏಜೆನ್ಸೀಸ್
Published 2 ಮಾರ್ಚ್ 2021, 5:02 IST
Last Updated 2 ಮಾರ್ಚ್ 2021, 5:02 IST
   

ಹತ್ರಾಸ್ (ಉತ್ತರಪ್ರದೇಶ):‌ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ 2018ರ ಜುಲೈನಲ್ಲಿ ದೂರು ನೀಡಿದ್ದ ಇಲ್ಲಿನ ನಿವಾಸಿ ಅಮರೀಶ್‌ ಶರ್ಮಾ ಎನ್ನುವವರನ್ನು ಸೋಮವಾರ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಮಾತನಾಡಿರುವಹತ್ರಾಸ್‌ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್‌ (ಎಸ್ಪಿ) ವಿನೀತ್‌ ಜೈಸ್ವಾಲ್‌,ʼಗೌರವ್‌ ಶರ್ಮಾ ಹಾಗೂ ಆತನ ಸ್ನೇಹಿತರು ಅಮರೀಶ್‌ ಶರ್ಮಾ ಎನ್ನುವವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂಬ ವಿಚಾರ ನೋಜಲಪುರ್‌ ಗ್ರಾಮದಲ್ಲಿರುವ ಸಾಸ್ನಿ ಪೊಲೀಸ್‌ ಠಾಣೆಯಿಂದ ಸೋಮವಾರ (ಮಾರ್ಚ್‌ 1ರ) ಸಂಜೆ ನಾಲ್ಕು ಗಂಟೆ ವೇಳೆ ತಿಳಿಯಿತುʼ

ADVERTISEMENT

ತಲೆ ತಪ್ಪಿಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ವಿಚಾರಣೆ ನಡೆಸುವ ಸಲುವಾಗಿ ವಿಶೇಷ ತಂಡ ರಚಿಸಲಾಗಿದೆ.ಪ್ರಕರಣ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ʼಅಮರೀಶ್‌ ಶರ್ಮಾ ಅವರು 2018ರ ಜುಲೈನಲ್ಲಿ ಗೌರವ್‌ ಶರ್ಮಾ ವಿರುದ್ಧ ಲೈಂಗಿಕ ಕಿರುಕುಳ ಸಂಬಂಧ ದೂರು ನೀಡಿದ್ದರು. ಈ ಪ್ರಕರಣದಲ್ಲಿಜೈಲು ಸೇರಿದ್ದ ಗೌರವ್‌ ಒಂದು ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಅದಾದ ಬಳಿಕ ಎರಡೂ ಕುಟುಂಬಗಳ ಸಂಬಂಧ ಹಳಸಿತ್ತುಎಂಬುದುವಿಚಾರಣೆ ವೇಳೆ ಬೆಳಕಿಗೆ ಬಂದಿದೆʼ ಎಂದಿದ್ದಾರೆ.

ಮುಂದುವರಿದು, ʼಆರೋಪಿಯಹೆಂಡತಿ ಮತ್ತು ಚಿಕ್ಕಮ್ಮ ಹಾಗೂ ಸಂತ್ರಸ್ತ ಅಮರೀಶ್‌ ಅವರ ಇಬ್ಬರು ಮಕ್ಕಳು ಊರಿನ ದೇವಾಲಯಕ್ಕೆ ತೆರಳಿದ್ದರು. ಈ ವೇಳೆ ಎರಡೂ ಗುಂಪಿನವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ವಲ್ಪ ಸಮಯದ ಬಳಿಕ ಅಮರೀಶ್‌ ಹಾಗೂ ಗೌರವ್‌ ಸ್ಥಳಕ್ಕೆ ಬಂದಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಅಮರೀಶ್‌ ಅವರತ್ತ ಗೌರವ್ ‌ಗುಂಡು ಹಾರಿಸಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಗಾಯಾಳು ಅಮರೀಶ್‌ ಮೃತಪಟ್ಟಿದ್ದಾರೆʼ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.