ADVERTISEMENT

ಹಣ ಅಕ್ರಮ ವರ್ಗಾವಣೆ: 14 ದಿನ ನ್ಯಾಯಾಂಗ ಬಂಧನಕ್ಕೆ ಮಹಾರಾಷ್ಟ್ರ ಸಚಿವ ಮಲಿಕ್

ಪಿಟಿಐ
Published 7 ಮಾರ್ಚ್ 2022, 10:02 IST
Last Updated 7 ಮಾರ್ಚ್ 2022, 10:02 IST
ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್‌ ಮಲಿಕ್‌
ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್‌ ಮಲಿಕ್‌   

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ಮುಖಂಡ, ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್‌ ಮಲಿಕ್‌ ಅವರನ್ನು ಇಲ್ಲಿನ ವಿಶೇಷ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನವಾಬ್‌ ಮಲಿಕ್‌ ಅವರನ್ನು ಫೆಬ್ರುವರಿ 23ರಂದು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿತ್ತು. ದಕ್ಷಿಣ ಮುಂಬೈನ ಇ.ಡಿ ಕಚೇರಿಯಲ್ಲಿ ಸುಮಾರು ಐದು ಗಂಟೆ ಅವರನ್ನು ಪ್ರಶ್ನಿಸಲಾಗಿತ್ತು.

ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಅವರನ್ನು ಸೋಮವಾರ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಆರ್‌.ಎನ್‌.ರೋಕಡೆ ಅವರ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆಗಾಗಿ ಇ.ಡಿ ಅವಧಿ ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡದಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ. ಮಾರ್ಚ್‌ 21ರ ವರೆಗೂ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.

ADVERTISEMENT

ದಾವೂದ್‌ ಇಬ್ರಾಹಿಂ ಮತ್ತು ಆತನ ಸಹಚರರ ವಿರುದ್ಧ ಎನ್‌ಐಎ ಇತ್ತೀಚೆಗೆ ದಾಖಲಿಸಿರುವ ಎಫ್ಐಆರ್‌ ಆಧಾರದ ಮೇಲೆ ಇ.ಡಿ ಪ್ರಕರಣ ದಾಖಲಿಸಿಕೊಂಡಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಎನ್ಐಎ ಅಪರಾಧ ಪ್ರಕರಣ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.