ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಅನಿಲ್‌ ದೇಶಮುಖ್‌ಗೆ ನ್ಯಾಯಾಂಗ ಬಂಧನಕ್ಕೆ

ಪಿಟಿಐ
Published 15 ನವೆಂಬರ್ 2021, 11:44 IST
Last Updated 15 ನವೆಂಬರ್ 2021, 11:44 IST
ಅನಿಲ್‌ ದೇಶಮುಖ್‌
ಅನಿಲ್‌ ದೇಶಮುಖ್‌   

ಮುಂಬೈ: ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್ ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸಲು ಬಯಸದ ಕಾರಣ, ಇಲ್ಲಿನ ವಿಶೇಷ ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ವಿಚಾರಣೆ ನಡೆಸಿದ ಇ.ಡಿ ಇದೇ 1 ರಂದು ದೇಶಮುಖ್‌ ಅವರನ್ನು ಬಂಧಿಸಿತ್ತು. ಕಸ್ಟಡಿ ಅವಧಿ ಸೋಮವಾರ ಅಂತ್ಯಗೊಂಡಿತ್ತು. ಹೀಗಾಗಿ ಅವರನ್ನುಪಿಎಂಎಲ್‌ಎ ವಿಶೇಷ ನ್ಯಾಯಾಧೀಶ ಎಚ್‌.ಎಸ್‌. ಸತ್‌ಭಾಯ್ ಎದುರು ಹಾಜರುಪಡಿಸಲಾಗಿತ್ತು.

’ದೇಶಮುಖ್‌ ಅವರ ವಯಸ್ಸು ಮತ್ತು ಆರೋಗ್ಯದ ಹಿನ್ನೆಲೆಯನ್ನು ಪರಿಗಣಿಸಿ, ಅವರಿಗೆ ಬಂಧನದ ಅವಧಿಯಲ್ಲಿ ಮನೆಯ ಆಹಾರ ಮತ್ತು ಔಷಧಗಳನ್ನು ಪೂರೈಸಲು ಅನುಮತಿ ನೀಡುವಂತೆ ಮಾಜಿ ಸಚಿವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕಕ್ಷಿದಾರರಿಗೆ ಬೆನ್ನು ನೋವು ಇರುವುದರಿಂದ ನೆಲದ ಮೇಲೆ ಮಲಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರಿಗೆ ಹಾಸಿಗೆ ನೀಡುವಂತೆ ಅವರು ಕೇಳಿದ್ದರು.

ADVERTISEMENT

ವಕೀಲರ ಮನವಿ ಸ್ವೀಕರಿಸಿದ ನ್ಯಾಯಾಲಯ ಅನಿಲ್‌ ದೇಶಮುಖ್ ಅವರಿಗೆ ಹಾಸಿಗೆ ನೀಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಹಾಗೆಯೇ, ವೈದ್ಯರು ಸಲಹೆ ನೀಡಿದ ಔಷಧಗಳನ್ನು ಪೂರೈಸಲು ಅವಕಾಶ ನೀಡಿತು. ಆದರೆ, ಮನೆ ಆಹಾರ ಪೂರೈಕೆ ಮನವಿಯನ್ನು ತಡೆ ಹಿಡಿದಿದೆ. ಜೈಲಿನ ಊಟದ ಬಗ್ಗೆ ದೂರುಗಳು ಬಂದರೆ, ನಂತರ ಈ ಮನವಿಯನ್ನು ಪರಿಗಣಿಸುವುದಾಗಿ ನ್ಯಾಯಾಲಯ ಹೇಳಿತು.

ಪೊಲೀಸ್‌ ಇಲಾಖೆಯಲ್ಲಿ ₹100 ಕೋಟಿ ಲಂಚ ವಸೂಲಿ, ಸುಲಿಗೆಯ ಕುರಿತು ಮುಂಬೈ ಪೊಲೀಸ್‌ ಕಮಿಷನರ್‌ ಪರಮ್‌ಬೀರ್‌ ಸಿಂಗ್‌ ಅವರು ದೇಶಮುಖ್ ವಿರುದ್ಧ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ಸಿಬಿಐ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.