ADVERTISEMENT

ಸಾಂಸ್ಥಿಕ ಚೌಕಟ್ಟಿನ ನೈತಿಕತೆಯ ಅಧಃಪತನ: ರಾಹುಲ್‌ ಗಾಂಧಿ

‘ಅದಾನಿ, ನಿಯಂತ್ರಣ ಸಂಸ್ಥೆಗಳು, ಬಿಜೆಪಿ ನಡುವೆ ಅಪಾಯಕಾರಿ ನಂಟು’

ಪಿಟಿಐ
Published 29 ಅಕ್ಟೋಬರ್ 2024, 14:27 IST
Last Updated 29 ಅಕ್ಟೋಬರ್ 2024, 14:27 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಅವರ ವಿರುದ್ಧ ಕಾಂಗ್ರೆಸ್‌ ಪಕ್ಷವು ಮಂಗಳವಾರ ಹೊಸದಾಗಿ ಹಿತಾಸಕ್ತಿ ಸಂಘರ್ಷದ ಆರೋಪಗಳನ್ನು ಮಾಡಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, ‘ಏಕಾಧಿಕಾರ ರಕ್ಷಿಸುವ ಗುಂಪಿನ (ಮೊನಾಪಲಿ ಬಚಾವೊ ಸಿಂಡಿಕೇಟ್‌) ಹುಟ್ಟಿನೊಂದಿಗೆ ದೇಶದ ಸಾಂಸ್ಥಿಕ ಚೌಕಟ್ಟಿನ ನೈತಿಕತೆಯು ಅಧಃಪತನಕ್ಕೆ ತಲುಪಿದೆ. ಈ ಗುಂಪಿನ ಹಿಂದೆ ಅದಾನಿ, ದೇಶದ ಪ್ರಮುಖ ನಿಯಂತ್ರಣ ಸಂಸ್ಥೆಗಳು ಮತ್ತು ಮೋದಿ ನೇತೃತ್ವದ ಬಿಜೆಪಿ ನಡುವಿನ ಅಪಾಯಕಾರಿ ನಂಟು ಇದೆ’ ಎಂದು ಹೇಳಿದ್ದಾರೆ. 

ಮಾಧವಿ ಬುಚ್‌ ಅವರು ಮಾಡಿದ್ದಾರೆ ಎನ್ನಲಾದ ಅಕ್ರಮಗಳ ಕುರಿತು ಸರಣಿ ವಿಡಿಯೊಗಳನ್ನು ಬಿಡುಗಡೆ ಮಾಡುತ್ತಿರುವ ಕಾಂಗ್ರೆಸ್‌, ಮಂಗಳವಾರ ಇದೇ ಸರಣಿಯ 3ನೇ ವಿಡಿಯೊವನ್ನು ಬಿಡುಗಡೆ ಮಾಡಿದೆ. ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಮಾತುಕತೆ ನಡೆಸುತ್ತಿರುವ ದೃಶ್ಯಗಳು ಈ ವಿಡಿಯೊಗಳಲ್ಲಿವೆ. 

ADVERTISEMENT

‘ವಿದೇಶಿ ಮೂಲದ ಶಸ್ತ್ರಾಸ್ತ್ರಗಳನ್ನು ರಿಬ್ರ್ಯಾಂಡ್‌ ಮಾಡುವ ಮೂಲಕ ಕಂಪನಿಯು ಹೇಗೆ ಲಾಭ ಮಾಡುತ್ತಿದೆ ಎಂಬ ಮಾಹಿತಿಯನ್ನು ಅದಾನಿ ಅವರ ಡಿಫೆನ್ಸ್‌ ವೆಬ್‌ಸೈಟ್‌ ಬಹಿರಂಗ ಮಾಡಿದೆ. ಇತ್ತ ತರಬೇತಿ, ಪಿಂಚಣಿ ಮತ್ತು ಯುವ ಸೈನಿಕರು ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವು ‘ಅಗ್ನಿವೀರ’ದಂತಹ ಯೋಜನೆಗಳ ಮೂಲಕ ಬೇರೆ ಕಡೆಗೆ ಹೋಗುತ್ತಿದೆ’ ಎಂದು ರಾಹುಲ್‌ ಗಾಂಧಿ  ಆರೋಪಿಸಿದ್ದಾರೆ.

‘ಈ ದ್ರೋಹವು ರಾಷ್ಟ್ರೀಯ ಭದ್ರತೆ ಮತ್ತು ನಮ್ಮ ಯುವಜನರ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ‘ಸೆಬಿ’ಯ ಪ್ರಾವಿತ್ರ್ಯವನ್ನು ಹಾಳುಗೆಡವುತ್ತಿದ್ದಾರೆ. ಈ ಮೂಲಕ ಕೋಟ್ಯಂತರ ಸಣ್ಣ ಮತ್ತು ಮಧ್ಯಮ ಹೂಡಿಕೆದಾರರ ಶ್ರಮದಾಯಕ ಉಳಿತಾಯವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನರೇಂದ್ರ ಮೋದಿ ಅವರೇ... ನೀವು ನೇಮಕ ಮಾಡಿದ ಸೆಬಿ ಅಧ್ಯಕ್ಷರ ಅವಧಿಯಲ್ಲಾದ ತಪ್ಪನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದ್ದಾರೆ.

‘ನಿಮ್ಮ ಪ್ರೀತಿಯ ಸ್ನೇಹಿತ ಅದಾನಿಗಾಗಿ ಹೇಗೆ ಏಕಸ್ವಾಮ್ಯ ಸೃಷ್ಟಿಸಿದಿರಿ ಎಂಬುದು ಬಯಲಾಗಲಿದೆ! ಹಗರಣದ ಪ್ರತಿಯೊಂದು ಅಂಶದ ತನಿಖೆಗೆ ಜಂಟಿ ಸಂಸದೀಯ ಸಮಿತಿಯ ಅಗತ್ಯವಿದೆ’ ಎಂದು ಖರ್ಗೆ ಅವರು ‘ಎಕ್ಸ್‌‘ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ನ ಹೊಸ ಆರೋಪಗಳು

*ಬುಚ್‌ ಅವರು ತಮ್ಮ ಸ್ವಂತ ಆಸ್ತಿಯನ್ನು ಇಂಡಿಯಾಬುಲ್ಸ್‌ ಸಮೂಹದೊಂದಿಗೆ ನೇರ ಸಂಬಂಧ ಹೊಂದಿರುವ ಕಂಪನಿಗೆ ಬಾಡಿಗೆಗೆ ನೀಡಿದ್ದಾರೆ.

*ಬುಚ್‌ ಅವರು ಸೆಬಿಯ ಅಧ್ಯಕ್ಷರಾದ ನಂತರವೂ ಪ್ರಿಡಿಬಲ್‌ ಹೆಲ್ತ್‌ ಪ್ರೈ.ಲಿ. ಕಂಪನಿಯಲ್ಲಿ ಈಕ್ವಿಟಿ ಹೊಂದಿದ್ದಾರೆ ಮತ್ತು ಹೂಡಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಬುಚ್‌ ಅಥವಾ ಅದಾನಿ ಸಮೂಹದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.