ನವದೆಹಲಿ: ಅವಧಿಗೂ ಮುನ್ನವೇ ಈ ವರ್ಷದ ಮುಂಗಾರು ಮಾರುತಗಳು ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ದಕ್ಷಿಣ ಅಂಡಮಾನ್ ಸಮುದ್ರ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಇದರ ಪರಿಣಾಮ ನಿಕೋಬಾರ್ ದ್ವೀಪ ಸಮೂಹಗಳ ಬಳಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ ಎಂದು ತಿಳಿಸಿದೆ. ಮೇ 20ರ ನಂತರ ಸಾಮಾನ್ಯವಾಗಿ ಈ ಭಾಗದಲ್ಲಿ ಮುಂಗಾರು ಮಾರುತಗಳು ಕಳೆಗಟ್ಟುತ್ತಿದ್ದವು.
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಬಂಗಾಳ ಕೊಲ್ಲಿಯ ಕೇಂದ್ರ ಭಾಗವನ್ನು ಆವರಿಸುವ ಮುಂಗಾರು ಮಾರುತಗಳು ಸಂಪೂರ್ಣ ಬಂಗಾಳ ಕೊಲ್ಲಿಯನ್ನು ಸುತ್ತುವರಿದು ಅರಬ್ಬಿ ಸಮುದ್ರದ ಕಡೆಗೆ ಚಲಿಸಲಿವೆ ಎಂದು ತಿಳಿಸಿದೆ.
ಮಾರುತಗಳ ಈ ಬೆಳವಣಿಗೆಯು ಕೇರಳ ಕರಾವಳಿಗೆ ಅವಧಿಗೂ ಮುನ್ನವೇ ಮುಂಗಾರು ಅಪ್ಪಳಿಸಲಿದೆ ಎನ್ನುವ ಮುನ್ಸೂಚನೆಯನ್ನು ಪುಷ್ಟೀಕರಿಸಿವೆ. ಕಳೆದ ವಾರ ಐಎಂಡಿ ಅವಧಿಗೂ ಮುನ್ನವೇ ಅಂದರೆ ಮೇ 27ರ ಹೊತ್ತಿಗೆ ಕೇರಳ ಕರಾವಳಿ ಮೂಲಕ ಪ್ರವೇಶಿಸಿ ಮುಂಗಾರು ಒಳನಾಡುಗಳನ್ನು ಆವರಿಸಲಿದೆ ಎಂದು ಹೇಳಿತ್ತು.
ಸಾಮಾನ್ಯವಾಗಿ ಜೂನ್ 1 ರಂದು ಮುಂಗಾರು ಕೇರಳ ಕರಾವಳಿ ಪ್ರವೇಶಿಸುತ್ತದೆ.
2009 ರಲ್ಲಿ ಮುಂಗಾರು ಅವಧಿಗೂ ಮುನ್ನವೇ (ಮೇ 23) ಕೇರಳ ಕರಾವಳಿ ಪ್ರವೇಶಿಸಿದ್ದನ್ನು ಬಿಟ್ಟರೆ ಇದೇ ವರ್ಷ ಅವಧಿಗೂ ಮುನ್ನ ಮುಂಗಾರು ಆಗಮಿಸುತ್ತಿದೆ ಎಂದು ಐಎಂಡಿ ಹೇಳಿದೆ.
ಈ ವರ್ಷ (2025) ಮುಂಗಾರು ವಾಡಿಕೆಗಿಂತ ಹೆಚ್ಚು ಮಳೆ ಸುರಿಸಲಿದೆ ಎಂದು ಐಎಂಡಿ ಈಗಾಗಲೇ ಮುನ್ಸೂಚನೆ ನೀಡಿದೆ.
ದೇಶದ ಕೃಷಿ ವಲಯದ ಆಧಾರಸ್ಥಂಭವಾದ ಮುಂಗಾರು ಮಳೆ ದೇಶದ ಶೇ 42 ರಷ್ಟು ಜನರ ಜೀವನ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ದೇಶದ ಜಿಡಿಪಿಗೆ ಶೇ 18 ರಷ್ಟು ಕೊಡುಗೆ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.