ADVERTISEMENT

ಮೊರ್ಬಿ ದುರಂತ: ₹14 ಕೋಟಿ ಮಧ್ಯಂತರ ಪರಿಹಾರ ನೀಡಿದ ಒರೆವಾ ಕಂಪನಿ

ಪಿಟಿಐ
Published 18 ಏಪ್ರಿಲ್ 2023, 12:41 IST
Last Updated 18 ಏಪ್ರಿಲ್ 2023, 12:41 IST
.
.   

ಅಹಮದಾಬಾದ್‌: ಗುಜರಾತ್‌ನ ಮೊರ್ಬಿಯ ತೂಗು ಸೇತುವೆ ಕುಸಿತ ಪ್ರಕರಣದ ಸಂತ್ರಸ್ತರಿಗೆ ನೀಡಬೇಕಿದ್ದ ₹14.62 ಕೋಟಿ ಮಧ್ಯಂತರ ಪರಿಹಾರವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದು ಒರೆವಾ ಗ್ರೂಪ್‌ ಮಂಗಳವಾರ ಗುಜರಾತ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ.ಜೆ.ದೇಸಾಯಿ ಮತ್ತು ನ್ಯಾಯಮೂರ್ತಿ ಬಿರೆನ್‌ ವೈಷ್ಣವ್‌ ಅವರಿದ್ದ ನ್ಯಾಯಪೀಠವು, ಫೆ.22ರಂದು ವಿಭಾಗೀಯ ಪೀಠ ನೀಡಿದ ಆದೇಶದ ಅನುಸಾರ ಪರಿಹಾರ ಮೊತ್ತವನ್ನು ಹಂಚಿಕೆ ಮಾಡಬಹುದು ಎಂದು ತಿಳಿಸಿದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸರ್ಕಾರದ ಸಂಬಂಧಿತ ಅಧಿಕಾರಿಗಳ ನೆರವಿನಿಂದ ಸಂತ್ರಸ್ತರಿಗೆ ಪರಿಹಾರ ಹಂಚಿಕೆಯಾಗಿದೆಯೇ ಎಂದು ಖಾತ್ರಿ ಮಾಡಿಕೊಳ್ಳಬೇಕು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕೋರ್ಟ್‌ ನಿರ್ದೇಶನ ನೀಡಿದೆ.

ADVERTISEMENT

ಕಳೆದ ವರ್ಷ ಅಕ್ಟೋಬರ್‌ 30ರಂದು ಮೊರ್ಬಿಯ ತೂಗು ಸೇತುವೆ ಕುಸಿದು 135 ಮಂದಿ ಮೃತಪಟ್ಟಿದ್ದರು. ಬ್ರಿಟಿಷ್‌ ಕಾಲದ ಸೇತುವೆಯ ದುರಸ್ತಿ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ಒರೆವಾ ಗ್ರೂಪ್‌ ಪಡೆದಿತ್ತು. ಹೀಗಾಗಿ ಮೃತರ ಕುಟುಂಬಸ್ಥರಿಗೆ ತಲಾ ₹10 ಲಕ್ಷ, ಗಾಯಗೊಂಡ 56 ಮಂದಿಗೆ ತಲಾ ₹2 ಲಕ್ಷ ಮಧ್ಯಂತರ ಪರಿಹಾರ ನೀಡುವಂತೆ ಫೆ.22ರಂದು ಕೋರ್ಟ್‌ ಕಂಪನಿಗೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.