ADVERTISEMENT

ದೌರ್ಜನ್ಯ: ಬೆಂಗಳೂರಿನಿಂದಲೇ ಹೆಚ್ಚು ದೂರು

ಜುಲೈನಲ್ಲಿ ಗರಿಷ್ಠ ಸಂಖ್ಯೆಯ ದೂರು: ರಾಷ್ಟ್ರೀಯ ಮಹಿಳಾ ಆಯೋಗ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 20:39 IST
Last Updated 7 ಸೆಪ್ಟೆಂಬರ್ 2021, 20:39 IST
   

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ಕರ್ನಾಟಕದಿಂದ 350 ದೂರುಗಳುಈ ವರ್ಷ ದಾಖಲಾಗಿವೆ. ಇವುಗಳ ಪೈಕಿ, ಬೆಂಗಳೂರು ಜಿಲ್ಲೆಯಿಂದ ದಾಖಲಾದ ದೂರುಗಳ ಸಂಖ್ಯೆಯೇ (ಶೇ 62.28) ಹೆಚ್ಚು.

ನಂತರದ ಸ್ಥಾನದಲ್ಲಿ, ಬೆಂಗಳೂರು ಗ್ರಾಮಾಂತರ (26), ಮೈಸೂರು (16) ಹಾಗೂ ದಕ್ಷಿಣ ಕನ್ನಡ (14) ಜಿಲ್ಲೆಗಳು ಇವೆ. ರಾಜ್ಯದಲ್ಲಿನ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ದೂರುಗಳ ಸಂಖ್ಯೆ ಪ್ರತಿ ತಿಂಗಳೂ ಹೆಚ್ಚುತ್ತಲೇ ಹೋಗಿದೆ; ಮೇ ಮತ್ತು ಜೂನ್‌ ತಿಂಗಳಲ್ಲಿ ಮಾತ್ರ ಹೆಚ್ಚಳ ಆಗಿಲ್ಲ.

ಜನವರಿಯಲ್ಲಿ ನೀಡಲಾದ ದೂರುಗಳ ಸಂಖ್ಯೆ 37 ಇದ್ದರೆ, ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಆ ಸಂಖ್ಯೆ ತಲಾ 44 ಆಗಿತ್ತು. ಮೇ ಮತ್ತು ಜೂನ್‌ನಲ್ಲಿ ಮಾತ್ರ ಕ್ರಮವಾಗಿ 40 ಹಾಗೂ 35 ದೂರುಗಳು ದಾಖಲಾಗಿದ್ದವು.

ADVERTISEMENT

ಜುಲೈನಲ್ಲಿ 49ಕ್ಕೆ ಏರಿತ್ತು. ಆಗಸ್ಟ್‌ನಲ್ಲಿ 50 ದೂರು ದಾಖಲಾಗಿವೆ. ಇದು ಈ ವರ್ಷ ಇದುವರೆಗೆ, ಮಹಿಳಾ ಆಯೋಗದಲ್ಲಿ ಕರ್ನಾಟಕದಿಂದ ದಾಖಲಾದ ದೂರುಗಳ ಪೈಕಿ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಈ ತಿಂಗಳ 6ನೇ ತಾರೀಖಿನವರೆಗೆ 12 ದೂರುಗಳು ರಾಷ್ಟ್ರೀಯ ಮಹಿಳಾ ಆಯೋಗವನ್ನು ತಲುಪಿವೆ.

2020ರಲ್ಲಿ, ಕರ್ನಾಟಕದಿಂದ 467 ದೂರುಗಳು ದಾಖಲಾಗಿದ್ದವು. ಈ ವರ್ಷದ ಮೊದಲ ಎಂಟು ತಿಂಗಳಲ್ಲೇ 338 ದೂರು ದಾಖಲಾಗಿವೆ. ಕಳೆದ ವರ್ಷ ಈ ಅವಧಿಯಲ್ಲಿ ಈ ಸಂಖ್ಯೆ 305 ಇತ್ತು.

ರಾಷ್ಟ್ರೀಯ ಮಹಿಳಾ ಆಯೋಗದ ಅಂಕಿ–ಅಂಶಗಳ ಪ್ರಕಾರ, ಈ ವರ್ಷದ ಆರಂಭದ ಎಂಟು ತಿಂಗಳಲ್ಲಿಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿ ದೇಶದ ವಿವಿಧ ಭಾಗಗಳಿಂದಬಂದಿರುವ ದೂರುಗಳಲ್ಲಿ ಶೇ 46ರಷ್ಟು ಹೆಚ್ಚಳವಾಗಿದೆ.

2020ರಲ್ಲಿಮೊದಲ ಎಂಟು ತಿಂಗಳವರೆಗೆ 13,618 ದೂರುಗಳು ಬಂದಿದ್ದವು. ಈ ವರ್ಷ ಇದೇ ಅವಧಿಯಲ್ಲಿ 19,953 ದೂರು ಸ್ವೀಕರಿಸಲಾಗಿದೆ. ಸೆ.6ರವರೆಗೆ 20,740 ದೂರುಗಳು ಬಂದಿವೆ. ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಉತ್ತರಪ್ರದೇಶದವಾಗಿದ್ದು (10,484), ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ದೆಹಲಿ (2,240), ಮಹಾರಾಷ್ಟ್ರ (1,007) ರಾಜ್ಯಗಳಿವೆ.

ತಮಿಳುನಾಡು (375) ಏಳನೇ ಸ್ಥಾನದಲ್ಲಿದ್ದರೆ, ಕರ್ನಾಟಕವು ಎಂಟನೇ ಸ್ಥಾನದಲ್ಲಿದೆ. 2021ರ ಜುಲೈನಲ್ಲಿ 3,248 ದೂರುಗಳು ಬಂದಿವೆ. ಇವು, 2015ರಿಂದ ತಿಂಗಳೊಂದರಲ್ಲೇ ಸ್ವೀಕರಿಸಿದ ಅತಿ ಹೆಚ್ಚು ದೂರುಗಳು ಎಂದು ಆಯೋಗ
ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.