ಮುಂಬೈನಲ್ಲಿ ಭಾನುವಾರ ಸುರಿದ ಮಳೆಯ ನಡುವೆ ಪಾದಚಾರಿಗಳು ನೀರಿನಲ್ಲಿಯೇ ಸಾಗಿದರು.
ಪಿಟಿಐ ಚಿತ್ರ
ಮುಂಬೈ: ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ನಗರದ ಹಲವು ಪ್ರದೇಶಗಳಲ್ಲಿ 20 ಸೆಂ.ಮೀ.ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಮುಂಬೈನ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಇಂದು (ಸೋಮವಾರ) ಬೆಳಗ್ಗೆ 8 ಗಂಟೆಯವರೆಗೆ ಮಳೆ ಪ್ರಮಾಣ ಹೆಚ್ಚಾಗಿತ್ತು. ಭಾರಿ ಮಳೆಯಿಂದಾಗಿ ರೈಲು ಸಂಚಾರದಲ್ಲೂ ವ್ಯತ್ಯಯವಾಗಿತ್ತು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಪ್ರದೇಶಗಳಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಮೂರು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನ್‌ಖುರ್ದ್‌ನ ಟ್ರಾಂಬೆಯಲ್ಲಿ 24.1ಸೆಂ.ಮೀ. ಅತ್ಯಧಿಕ ಮಳೆ ದಾಖಲಾಗಿದೆ. ಮನ್‌ಖುರ್ದ್ ನೂತನ್ ವಿದ್ಯಾಮಂದಿರದಲ್ಲಿ 22.4 ಸೆಂ.ಮೀ. ವಡಾಲಾದ ನಾಡಕರ್ಣಿ ಪಾರ್ಕ್‌ನಲ್ಲಿ 22.3 ಸೆಂ.ಮೀ. ಮತ್ತು ಭಾಂಡಪ್‌ನ 'ಎನ್' ವಾರ್ಡ್‌ನಲ್ಲಿ 21.5 ಸೆಂ.ಮೀ. ಮಳೆ ಪ್ರಮಾಣ ದಾಖಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ( ಬಿಎಂಸಿ) ಹೇಳಿದೆ.
ಮಲಬಾರ್ ಮತ್ತು ಮುಲುಂಡ್ 3.4 ಸೆಂ.ಮೀ. ಮಳೆಯಾಗಿದ್ದು, ಭಾಂಡಪ್ 2.9 ಸೆಂ.ಮೀ, ಪೂರ್ವ ವಡಾಲಾದಲ್ಲಿ 2.4 ಸೆಂ.ಮೀ. ಮತ್ತು ವರ್ಸೋವಾದಲ್ಲಿ 2 ಸೆಂ.ಮೀ. ಮಳೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.