ADVERTISEMENT

ನೂಹ್‌: ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ– ಬ್ಯಾಂಕ್‌, ಶಿಕ್ಷಣ ಸಂಸ್ಥೆ ಬಂದ್‌

ಪಿಟಿಐ
Published 27 ಆಗಸ್ಟ್ 2023, 11:25 IST
Last Updated 27 ಆಗಸ್ಟ್ 2023, 11:25 IST
ನೂಹ್‌ ಪಟ್ಟಣದಲ್ಲಿ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಭದ್ರತೆ ಕಲ್ಪಿಸಲಾಗಿದೆ
ನೂಹ್‌ ಪಟ್ಟಣದಲ್ಲಿ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಭದ್ರತೆ ಕಲ್ಪಿಸಲಾಗಿದೆ   

ನೂಹ್‌: ಹರಿಯಾಣದ ನೂಹ್‌ನಲ್ಲಿ ಸಮುದಾಯಗಳ ನಡುವಿನ ಘರ್ಷಣೆಯಿಂದ ಜುಲೈನಲ್ಲಿ ಅರ್ಧಕ್ಕೆ ನಿಂತಿದ್ದ ’ಬ್ರಿಜ್‌ ಮಂಡಲ್‌ ಶೋಭಾ ಯಾತ್ರೆ’ಯನ್ನು ಸೋಮವಾರ (ಆಗಸ್ಟ್‌ 28) ನಡೆಸುವುದಾಗಿ ಸರ್ವ ಜಾತೀಯ ಹಿಂದೂ ಮಹಾಪಂಚಾಯತ್‌ ಹೇಳಿದೆ. 

ಅಧಿಕಾರಿಗಳು ಅನುಮತಿ ನೀಡದಿದ್ದರೂ ಮೆರವಣಿಗೆ ನಡೆಸಲು ಹಿಂದೂ ಪರಿಷತ್‌ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನೂಹ್‌ ಸೇರಿ ಹಲವು ಪ್ರದೇಶಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ.  

ಸೆಪ್ಟೆಂಬರ್‌ 3 ರಿಂದ 7ರವರೆಗೆ  ನೂಹ್‌ನಲ್ಲಿ ಜಿ20 ಶೆರ್ಪಾ ಗುಂಪುಗಳ ಸಭೆ ಇರುವ ಹಿನ್ನೆಲೆಯಲ್ಲಿ ಯಾತ್ರೆ ನಡೆಸಲು ಅನುಮತಿ ನೀಡಲಾಗಿಲ್ಲ ಎಂದು ಹರಿಯಾಣ ಪೊಲೀಸ್‌ ಮಹಾನಿರ್ದೇಶಕ ಶತ್ರುಜಿತ್‌ ಕಪೂರ್‌ ತಿಳಿಸಿದ್ದಾರೆ.

ADVERTISEMENT

ಮುಂಜಾಗೃತಾ ಕ್ರಮವಾಗಿ ಬಿಗಿ ಬಂದೋಬಸ್ತ್‌

ಅರೆಸೇನಾ ಪಡೆ ಮತ್ತು ಭದ್ರತಾ ಸಿಬ್ಬಂದಿಗೆ ರಾಜ್ಯದ ಒಳಗೆ ಮತ್ತು ಜಿಲ್ಲೆಗಳ ಗಡಿಗಳಲ್ಲಿ ಹದ್ದಿನಕಣ್ಣಿಡಲು ಸೂಚನೆ ನೀಡಲಾಗಿದೆ. 

ಆಗಸ್ಟ್‌ 26 ರಿಂದ 28ರವರೆಗೆ ಮೊಬೈಲ್‌ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಭದ್ರತೆಗಾಗಿ ನೂಹ್‌ನಲ್ಲಿ 1,900 ಹರಿಯಾಣ ಪೊಲೀಸ್‌ ಸಿಬ್ಬಂದಿ, 24 ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ದಾರಿಗಳನ್ನು ಬಂದ್‌ ಮಾಡಲಾಗಿದ್ದು, ಹೊರಗಿನಿಂದ ಯಾರೂ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ದೇವಸ್ಥಾನಗಳನ್ನು ಬಂದ್‌ ಮಾಡಲಾಗಿದೆ ಎಂದು ಪೊಲೀಸ್‌ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತದಿಂದ ಶಿಕ್ಷಣ ಸಂಸ್ಥೆ, ಬ್ಯಾಂಕ್‌ಗಳನ್ನು ಬಂದ್‌ ಮಾಡಲಾಗಿದ್ದು, ಎಸ್‌ಎಂಎಸ್‌ ಸೇವೆಗಳನ್ನೂ ನಿರ್ಬಂಧಿಸಿದೆ. ಸೆಕ್ಷನ್‌ 144 ಅಡಿಯಲ್ಲಿ ನಿಷೇಧಾಜ್ಞೆಯನ್ನೂ ಹೇರಲಾಗಿದ್ದು ನಾಲ್ಕು ಅಥವಾ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.