ADVERTISEMENT

ಸಾಮೂಹಿಕ ವಿವಾಹದಲ್ಲಿ 'ವಿಶ್ವದಾಖಲೆ': ಸತಿಪತಿಗಳಾದ 3500 ಜೋಡಿ

ಪಿಟಿಐ
Published 18 ಮಾರ್ಚ್ 2021, 11:29 IST
Last Updated 18 ಮಾರ್ಚ್ 2021, 11:29 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಲಖನೌ: ಉತ್ತರ ಪ್ರದೇಶದಲ್ಲಿ ಹೋಳಿಗೂ ಮುನ್ನ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 3,500ಕ್ಕೂ ಅಧಿಕ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿವೆ.

ಸರ್ಕಾರದ ವತಿಯಿಂದ ನಡೆದ ಈ ಸಾಮೂಹಿಕ ವಿವಾಹ ಕಾರ್ಯಕ್ರಮ "ವಿಶ್ವ ದಾಖಲೆ" ಎಂದು ಬಣ್ಣಿಸಿರುವ ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ, ಯೋಗಿ ಆದಿತ್ಯನಾಥ್ ಸರ್ಕಾರವು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗಾಗಿ ನಡೆಸುತ್ತಿರುವ ಹಲವು ಕಲ್ಯಾಣ ಯೋಜನೆಗಳ ಭಾಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದ್ಧಾರೆ.

ಕೆಲ ಮುಸ್ಲಿಂ ಯುವತಿಯರು ಸಹ ಬಾಳಸಂಗಾತಿಯನ್ನು ವರಿಸಿದ್ದು ವಿಶೇಷವಾಗಿತ್ತು.

ADVERTISEMENT

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 4 ವರ್ಷ ಮುಗಿಸಿರುವ ಯೋಗಿ ಆದಿತ್ಯಾನಾಥ್ ನವದಂಪತಿಗಳನ್ನು ಆಶೀರ್ವದಿಸಿದರು. ಕೋವಿಡ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.

ಇದೇವೇಳೆ, ಮಾತನಾಡಿದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ, ಸರ್ಕಾರದ ಸಾಮೂಹಿಕ ವಿವಾಹ ಯೋಜನೆಯಡಿ ನೋಂದಾಯಿತ ನಿರ್ಮಾಣ ಕಾರ್ಮಿಕರ ಹೆಣ್ಣು ಮಗಳ ಮದುವೆಗೆ ₹ 55,000, ಅಂತರ್ಜಾತಿ ವಿವಾಹಕ್ಕೆ ₹ 65,000 ಮತ್ತು ಸಾಮೂಹಿಕ ವಿವಾಹದ ಸ್ಥಳದಲ್ಲಿ ಮದುವೆಯಾಗಲು ₹ 75,000 ನೀಡಲಾಗಿದೆ. ಕಟ್ಟಡ ಕಾರ್ಮಿಕರ ಇಬ್ಬರು ಹೆಣ್ಣುಮಕ್ಕಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ ಎಂದರು.

ಲಖನೌ, ಹಾರ್ಡೋಯಿ, ಸೀತಾಪುರ, ರಾಯ್ ಬರೇಲಿ, ಉನ್ನಾವ್, ಲಖಿಂಪುರ್ ಖೇರಿ ಮತ್ತು ಬಾರಾಬಂಕಿ ಜಿಲ್ಲೆಗಳಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಹೆಣ್ಣುಮಕ್ಕಳು ಧಾರ್ಮಿಕ ಪದ್ಧತಿಗಳು ಮತ್ತು ಸಂಪ್ರದಾಯಗಳ ಪ್ರಕಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.