ADVERTISEMENT

ಒಂದು ಲಕ್ಷ ಓವೈಸಿಗಳು ಬಂದರೂ ಸಿಎಎ ಹಿಂಪಡೆಯಲ್ಲ: ಸಚಿವ ಕಿಶನ್‌ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:59 IST
Last Updated 25 ಫೆಬ್ರುವರಿ 2020, 12:59 IST
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್‌ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್‌ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ಹೈದರಾಬಾದ್: ‘ಒಂದು ಲಕ್ಷ ಮಂದಿ ಓವೈಸಿಗಳು ಬಂದರೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಿಂಪಡೆಯುವಂತೆ ಮಾಡುವುದು ಅವರಿಂದ ಸಾಧ್ಯವಿಲ್ಲ’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್‌ ರೆಡ್ಡಿ ಹೇಳಿದ್ದಾರೆ. ಸಿಎಎ ಕುರಿತು ಎಐಎಂಐಎಂ ಮುಖಂಡ, ಸಂಸದ ಅಸಾದುದ್ದೀನ್‌ ಓವೈಸಿ ನಿಲುವು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂಸಾಚಾರದಿಂದ ಈವರೆಗೂ ಭಾರತದಲ್ಲಿ ಯಾವುದೇ ಸಮಸ್ಯೆ ಬಗೆಹರಿದಿಲ್ಲ’ ಎಂದು ಹೇಳಿದ್ದಾರೆ. ಜತೆಗೆ, ಸಿಎಎ ವಿರೋಧಿಸುತ್ತಿರುವ ಪಕ್ಷಗಳು ಮಾತುಕತೆಗೆ ಮುಂದಾಗಬೇಕು. ಹಿಂಸಾಚಾರ ನಿಲ್ಲಿಸಬೇಕು ಎಂದೂ ಮನವಿ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭೇಟಿ ಸಂದರ್ಭದಲ್ಲಿಯೇ ನವದೆಹಲಿಯಲ್ಲಿ ಹಿಂಸಾಚಾರ ತೀವ್ರವಾಗಿದೆ. ಇದನ್ನು ಉಲ್ಲೇಖಿಸಿದ ಸಚಿವರು ‘ಎಲ್ಲರೂ ಸಂಯಮ ತೋರಬೇಕು’ ಎಂದು ಕೋರಿದ್ದಾರೆ.

ಇದು ಪ್ರಜಾಪ್ರಭುತ್ವ ದೇಶ. ಯಾರು ಬೇಕಿದ್ದರೂ ಪ್ರತಿಭಟಿಸಬಹುದು. ಆದರೆ, ನಾವು ಹಿಂಸೆಯನ್ನು ಸಹಿಸುವುದಿಲ್ಲ. ಶಾಂತಿ ಕಾಪಾಡಬೇಕು. ಪ್ರಚೋದನಾಕಾರಿ ಹೇಳಿಕೆ ನೀಡಬಾರದು ಎಂದು ನಾನು ಪ್ರತಿಭಟನಾನಿರತರಲ್ಲಿ ಕೋರುತ್ತೇನೆ ಎಂದು ಕಿಶನ್‌ ರೆಡ್ಡಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.