ADVERTISEMENT

ಮಧ್ಯಪ್ರದೇಶ ಉಪಚುನಾವಣೆ ಫಲಿತಾಂಶ: ಬಿಜೆಪಿ ಅಭ್ಯರ್ಥಿಗಳಿಗೆ ಸಿಂಧಿಯಾ ಅಭಿನಂದನೆ

ಏಜೆನ್ಸೀಸ್
Published 10 ನವೆಂಬರ್ 2020, 11:25 IST
Last Updated 10 ನವೆಂಬರ್ 2020, 11:25 IST
ಭೋಪಾಲ್‌ನಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತೆಯರ ಸಂಭ್ರಮಾಚರಣೆ – ಪಿಟಿಐ ಚಿತ್ರ
ಭೋಪಾಲ್‌ನಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತೆಯರ ಸಂಭ್ರಮಾಚರಣೆ – ಪಿಟಿಐ ಚಿತ್ರ   

ಭೋಪಾಲ್: ಮಧ್ಯಪ್ರದೇಶ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಪಕ್ಷದ ಗೆದ್ದ ಅಭ್ಯರ್ಥಿಗಳಿಗೆ ಜ್ಯೋತಿರಾದಿತ್ಯ ಸಿಂಧಿಯಾ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದ ಮತದಾರರಿಗೂ ಕೃತಜ್ಞತೆ ಸಮರ್ಪಿಸಿದ್ದಾರೆ.

‘ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಬೆಂಬಲಿಸಿದ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ವಿಜಯ ಸಾಧಿಸಿದ ಅಭ್ಯರ್ಥಿಗಳು ಸಾರ್ವಜನಿಕ ಸೇವೆಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧರಾಗಿರುವ ಬಗ್ಗೆ ವಿಶ್ವಾಸವಿದೆ’ ಎಂದು ಸಿಂಧಿಯಾ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಬಿಜೆಪಿಯು ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ ಆರು ಸ್ಥಾನ ಮತ್ತು ಬಿಎಸ್‌ಪಿ ಒಂದು ಸ್ಥಾನದಲ್ಲಿ ಮುಂದಿದೆ.

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಸಂಜೆ 3 ಗಂಟೆ ವರೆಗೆ ಬಿಜೆಪಿಯ ಮತಹಂಚಿಕೆ ಪ್ರಮಾಣ ಶೇ 51.3ರಷ್ಟಿದೆ. ಗ್ವಾಲಿಯರ್, ಗ್ವಾಲಿಯರ್ ಪೂರ್ವ, ದಬ್ರಾ, ಬಮೋರಿ, ಅಂಬಾ, ಸಾನ್ವರ್, ಬಂಡಾವರ್ ಮತ್ತು ಜೌರಾ ಕ್ಷೇತ್ರಗಳಲ್ಲಿ ಬಿಜೆಪಿ ಬಹುತೇಕ ಗೆಲುವಿನ ಹಂತದಲ್ಲಿದೆ.

ಕಾಂಗ್ರೆಸ್ ಮತಹಂಚಿಕೆ ಪ್ರಮಾಣ ಶೇ 39.9ರಷ್ಟಿದೆ. ಅಗರ್, ಕರೆರಾ, ಬಿಯಾವೊರ, ಸುಮಾವೊಲಿ ಹಾಗೂ ಗೊಹಾಡ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಈ ಮಧ್ಯೆ, ಭೋಪಾಲ್‌ನಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ಗೆ ಇದು ಪ್ರತಿಷ್ಠೆಯ ಕಣವಾಗಿದೆ. ತಮ್ಮ ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿಯೂ ಮಹತ್ವದ್ದಾಗಿದೆ.

ಕಾಂಗ್ರೆಸ್ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮಾರ್ಚ್‌ 11ರಂದು ಪಕ್ಷ ತ್ಯಜಿಸಿದ್ದರು. ಅವರಿಗೆ ನಿಷ್ಠರಾಗಿರುವ 22 ಕಾಂಗ್ರೆಸ್ ಶಾಸಕರೂ ರಾಜೀನಾಮೆ ನೀಡಿದ್ದರು. ಬಳಿಕ ಅವರು ಬಿಜೆಪಿ ಸೇರಿದ್ದರು. ಪರಿಣಾಮವಾಗಿ ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.