ADVERTISEMENT

ಮಧ್ಯಪ್ರದೇಶ | ಶೂಲೇಸ್‌ ಕಟ್ಟಿದ ಮಹಿಳೆ: ಎಸ್‌ಡಿಎಂ ವರ್ಗ ಮಾಡಿ ಸಿ.ಎಂ ಆದೇಶ

ಪಿಟಿಐ
Published 25 ಜನವರಿ 2024, 16:33 IST
Last Updated 25 ಜನವರಿ 2024, 16:33 IST
ಮೋಹನ್‌ ಯಾದವ್
ಮೋಹನ್‌ ಯಾದವ್   

ಭೋಪಾಲ್‌/ಸಿಂಗ್ರೌಲಿ(ಮಧ್ಯಪ್ರದೇಶ): ಸಾರ್ವಜನಿಕ ಸಭೆಯೊಂದರಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಉಪವಿಭಾಗಾಧಿಕಾರಿಯ (ಎಸ್‌ಡಿಎಂ) ಶೂಗಳ ಲೇಸ್‌ ಕಟ್ಟುತ್ತಿರುವ ಚಿತ್ರ ಹರಿದಾಡಿದ ಬೆನ್ನಲ್ಲೇ, ಉಪವಿಭಾಗಾಧಿಕಾರಿಯನ್ನು ವರ್ಗಾವಣೆ ಮಾಡಿ ಮುಖ್ಯಮಂತ್ರಿ ಮೋಹನ್‌ ಯಾದವ್‌ ಗುರುವಾರ ಆದೇಶಿಸಿದ್ದಾರೆ.

ಚಿತ್ರಂಗಿ ಉಪವಿಭಾಗಾಧಿಕಾರಿ ಅಸ್ವನ್‌ರಾಮ್ ಚಿರಾವನ್ ವರ್ಗಾವಣೆಗೊಂಡವರು.

ಸಿಂಗ್ರೌಲಿ ಜಿಲ್ಲೆಯ ಚಿತ್ರಂಗಿಯಲ್ಲಿ ಜ.22ರಂದು ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಆರತಿ ಮಾಡುವುದಕ್ಕಾಗಿ ಚಿರಾವನ್‌ ಅವರು ಶೂ ಬಿಚ್ಚಿದ್ದರು. ನಂತರ, ಮಹಿಳಾ ಸಿಬ್ಬಂದಿಯೊಬ್ಬರು ಚಿರಾವನ್‌ ಅವರ ಶೂಲೇಸ್‌ ಕಟ್ಟಿದ್ದರು. ಇದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಯಾದವ್‌ ಕ್ರಮ ಕೈಗೊಂಡಿದ್ದಾರೆ.

ADVERTISEMENT

ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ ಯಾದವ್, ‘ಉಪವಿಭಾಗಾಧಿಕಾರಿ ಚಿರಾವನ್ ಈ ಮೊದಲೇ ಗಾಯಗೊಂಡಿದ್ದರು. ಹೀಗಾಗಿ, ಅವರ ನೆರವಿಗೆ ಧಾವಿಸಿದ್ದ ಮಹಿಳಾ ಸಿಬ್ಬಂದಿ, ಅವರ ಶೂಲೇಸ್‌ ಕಟ್ಟಿದ್ದಾರೆ ಎಂದೂ ಗೊತ್ತಾಗಿದೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಚಿತ್ರ ಒಳ್ಳೆಯ ಸಂದೇಶ ರವಾನಿಸುವುದಿಲ್ಲ’ ಎಂದಿದ್ದಾರೆ.

‘ಆ ಮಹಿಳೆ ಸ್ವ ಇಚ್ಛೆಯಿಂದಲೇ ಈ ಕಾರ್ಯ ಮಾಡಿದ್ದರು ಹಾಗೂ ಇಂತಹ ನಡೆ ಹಿಂದೆ ಯಾವುದೇ ದುರುದ್ದೇಶವೂ ಇರಲಿಲ್ಲ ಎಂಬುದು ಗೊತ್ತಿದೆ. ಆದರೆ, ಮಹಿಳೆಗೆ ಗೌರವ ನೀಡುವುದು ನನ್ನ ಸರ್ಕಾರದ ಪಾಲಿಗೆ ಬಹಳ ಮಹತ್ವದ ವಿಚಾರ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.