ADVERTISEMENT

ಸಂತಾನಹರಣ ಚಿಕಿತ್ಸೆ | ಕೆಲಸ ಬಿಡಿ ಎಂಬ ಸೂಚನೆ ಹಿಂಪಡೆದ ಮಧ್ಯಪ್ರದೇಶ ಸರ್ಕಾರ

ಪಿಟಿಐ
Published 21 ಫೆಬ್ರುವರಿ 2020, 11:35 IST
Last Updated 21 ಫೆಬ್ರುವರಿ 2020, 11:35 IST
ಆರೋಗ್ಯ ಸಂಸ್ಥೆ
ಆರೋಗ್ಯ ಸಂಸ್ಥೆ   

ಭೋಪಾಲ್ (ಮಧ್ಯಪ್ರದೇಶ) : ‘ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ (2020ರ ಮಾರ್ಚ್‌ 31) ಒಬ್ಬ ಪುರುಷನಾದರೂ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಉತ್ತೇಜಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ವೇತನ ಕಡಿತ ಮಾಡಲಾಗುತ್ತದೆ ಅಥವಾ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ’ ಎಂದು ಮಧ್ಯಪ್ರದೇಶ ಸರ್ಕಾರವು ರಾಜ್ಯದ ಬುಹುಉದ್ದೇಶದ ವೈದ್ಯಕೀಯ ಕಾರ್ಯಕರ್ತರರಿಗೆ ಸೂಚನೆ ನೀಡಿತ್ತು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಸರ್ಕಾರವು ತನ್ನ ಸೂಚನೆಯನ್ನು ಹಿಂಪಡೆದಿದೆ.

ಆಶಾ ಕಾರ್ಯಕರ್ತರಂತೆಯೇ ಬಹುಉದ್ದೇಶದ ವೈದ್ಯಕೀಯ ಕಾರ್ಯಕರ್ತರೂ ಕಾರ್ಯನಿರ್ವಹಿಸುತ್ತಾರೆ. ರಾಜ್ಯ ವೈದ್ಯಕೀಯ ಇಲಾಖೆಯ ತಳಮಟ್ಟದ ನೌಕರರಾದ ಇವರು ಸ್ವಚ್ಛತೆ, ಪೌಷ್ಟಿಕಾಂಶ, ಅಂಟುರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಅಗತ್ಯವಿದ್ದವರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಾರೆ. ಕುಟುಂಬ ಯೋಜನೆಯ ಅನುಷ್ಠಾನದ ಹೊಣೆಯನ್ನೂ ಇವರು ನಿರ್ವಹಿಸುತ್ತಾರೆ.

‘ಮಧ್ಯಪ್ರದೇಶದ ಶೇ 0.5ರಷ್ಟು ಪುರುಷರು ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ’ ಎಂದು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು. ಹೀಗಾಗಿ ಈ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ರಾಜ್ಯ ಆರೋಗ್ಯ ಇಲಾಖೆ ಹಾಕಿಕೊಂಡಿತ್ತು. ಈ ಸಲುವಾಗಿ ವೈದ್ಯಕೀಯ ಕಾರ್ಯಕರ್ತರ ಮೇಲೆ ಒತ್ತಡ ಹೇರಲಾಗಿತ್ತು.

ADVERTISEMENT

‘ಜಿಲ್ಲಾಮಟ್ಟದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಿದಾಗ, ಪ್ರತಿಯೊಬ್ಬ ವೈದ್ಯಕೀಯ ಕಾರ್ಯಕರ್ತನೂ 5ರಿಂದ 10 ಪುರುಷರನ್ನು ಶಿಬಿರಕ್ಕೆ ಕರೆತರಬೇಕು’ ಎಂದು ಇನ್ನೊಂದು ಸುತ್ತೋಲೆ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.