ಇಂದೋರ್: ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಪರೀಕ್ಷೆಗೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮಧ್ಯಪ್ರದೇಶದ ಹೈಕೋರ್ಟ್‌ನ ಇಂದೋರ್ ಪೀಠವು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ - ಯುಜಿ ಫಲಿತಾಂಶ ಘೋಷಣೆಗೆ ಮಧ್ಯಂತರ ತಡೆ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್, ವಿದ್ಯುತ್ ಕಡಿತದಿಂದಾಗಿ ವಿದ್ಯಾರ್ಥಿನಿ ಪರೀಕ್ಷೆ ಮೇಲೆ ಪರಿಣಾಮ ಬೀರಿದೆ. ಪರೀಕ್ಷೆಯ ಸಮಯದಲ್ಲಿ ಸರಿಯಾದ ವ್ಯವಸ್ಥೆಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ವಿಚಾರಣೆ ನಡೆಯುವವರೆಗೂ ನೀಟ್-ಯುಜಿ ಫಲಿತಾಂಶವನ್ನು ಘೋಷಿಸಬಾರದು ಎಂದು ನಿರ್ದೇಶಿಸಿದ್ದಾರೆ.
ವಿದ್ಯಾರ್ಥಿನಿಯು ತನ್ನ ಅರ್ಜಿಯಲ್ಲಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಈ ಅರ್ಜಿಯ ಮುಂದಿನ ವಿಚಾರಣೆ ಜೂನ್ 30ರಂದು ನಡೆಯುವ ಸಾಧ್ಯತೆ ಇದೆ. ನ್ಯಾಯಾಲಯದ ನಿರ್ದೇಶನವು ದೇಶದ 21 ಲಕ್ಷ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಬಹುದು.|
ಮೇ 4 ರಂದು ನಡೆದ ಮೂರು ಗಂಟೆಗಳ ನೀಟ್ - ಯುಜಿಯ ಪರೀಕ್ಷೆಯ ಸಮಯದಲ್ಲಿ ಇಂದೋರ್‌ನ ಅನೇಕ ಕೇಂದ್ರಗಳಲ್ಲಿ ಒಂದರಿಂದ ಎರಡು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿತ್ತು. ಇದು ವಿದ್ಯಾರ್ಥಿಗಳ ಪರೀಕ್ಷೆ ಮೇಲೆ ಪರಿಣಾಮ ಬೀರಿದೆ ಎಂದು ಅರ್ಜಿದಾರೆ ಪರ ವಕೀಲ ಮೃದುಲ್ ಭಟ್ನಾಗರ್ ಸುದ್ದಿಸಂಸ್ಥೆ ‘ಪಿಟಿಐ‘ಗೆ ತಿಳಿಸಿದ್ದಾರೆ.
ಮೇ 4 ರಂದು ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ವಿದ್ಯುತ್ ವ್ಯತ್ಯಯದಿಂದಾಗಿ ಕೆಲವು ಕೇಂದ್ರಗಳಲ್ಲಿ ಮೇಣದಬತ್ತಿಯ ಬೆಳಕಿನಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಯಿತು ಎಂದು ಭಟ್ನಾಗರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.