ADVERTISEMENT

ಅಂಬಾಲಾ ಕಾರಾಗೃಹದ ಮಣ್ಣಿನಿಂದ ಗೋಡ್ಸೆ ಪ್ರತಿಮೆ ನಿರ್ಮಾಣ; ಹಿಂದೂ ಮಹಾಸಭಾ

ಪ್ರತಿ ರಾಜ್ಯದಲ್ಲೂ ಇಂತಹ ಪ್ರತಿಮೆ ಸ್ಥಾಪನೆ?

ಪಿಟಿಐ
Published 16 ನವೆಂಬರ್ 2021, 6:28 IST
Last Updated 16 ನವೆಂಬರ್ 2021, 6:28 IST

ಗ್ವಾಲಿಯರ್‌: ಹರಿಯಾಣದ ಅಂಬಾಲಾ ಕೇಂದ್ರ ಕಾರಾಗೃಹದ ಮಣ್ಣಿನಿಂದ ನಾಥೂರಾಮ್‌ ಗೋಡ್ಸೆ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಹಿಂದೂ ಮಹಾಸಭಾ ಹೇಳಿದೆ.

1949ರಲ್ಲಿ ಈ ಜೈಲಿನಲ್ಲಿ ಮಹಾತ್ಮ ಗಾಂಧೀಜಿ ಹಂತಕನಾದ ಗೋಡ್ಸೆಯನ್ನು ಗಲ್ಲಿಗೇರಿಸಲಾಗಿತ್ತು.

ಸೋಮವಾರ ಆಚರಿಸಲಾದ ಗೋಡ್ಸೆ ಪುಣ್ಯತಿಥಿಯ ಕಾರ್ಯಕ್ರಮದ ಬೆನ್ನಿಗೇ ಬಲಪಂಥೀಯ ಸಂಘಟನೆಯಿಂದ ಈ ಹೇಳಿಕೆ ಹೊರಬಿದ್ದಿದೆ.

ADVERTISEMENT

‘ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನು ನೇಣು ಹಾಕಿದ ಅಂಬಾಲಾ ಜೈಲಿನಿಂದ ಕಳೆದ ವಾರ ಮಹಾಸಭಾದ ಕಾರ್ಯಕರ್ತರು ಮಣ್ಣನ್ನು ತಂದಿದ್ದಾರೆ. ಈ ಮಣ್ಣಿನಿಂದ ಗೋಡ್ಸೆ ಮತ್ತು ಆಪ್ಟೆ ಅವರ ಪ್ರತಿಮೆಗಳನ್ನು ನಿರ್ಮಿಸಿ ಗ್ವಾಲಿಯರ್‌ನಲ್ಲಿರುವ ಮಹಾಸಭಾದ ಕಚೇರಿಯಲ್ಲಿ ಸ್ಥಾಪಿಸಲಾಗುವುದು’ ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜೈವೀರ್‌ ಭಾರದ್ವಾಜ್‌ ಸುದ್ದಿಗಾರರಿಗೆ ತಿಳಿಸಿದರು.

‘ಮಹಾಸಭಾದ ಕಾರ್ಯಕರ್ತರು ಸೋಮವಾರ ಉತ್ತರ ಪ್ರದೇಶ ಮೀರತ್‌ನಲ್ಲಿರುವ ಬಲಿದಾನ ಧಾಮದಲ್ಲಿ ಗೋಡ್ಸೆ ಮತ್ತು ಆಪ್ಟೆ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ನಾವು ಇಂತಹ ಪ್ರತಿಮೆಗಳನ್ನು ಪ್ರತಿ ರಾಜ್ಯದಲ್ಲೂ ಸ್ಥಾಪಿಸುತ್ತೇವೆ’ ಎಂದು ಅವರು ಹೇಳಿದರು.

ಇನ್ನೊಂದೆಡೆ ಸೋಮವಾರ ಇಲ್ಲಿ ಹಿಂದೂ ಮಹಾಸಭಾದ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿರಲಿಲ್ಲ ಎಂದು ಗ್ವಾಲಿಯರ್‌ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸತ್ಯೇಂದ್ರ ಸಿಂಗ್‌ ತೋಮರ್‌ ಹೇಳಿದರು.

ಇದುವರೆಗೂ ಯಾವುದೇ ಪ್ರತಿಮೆಯನ್ನು ಸ್ಥಾಪಿಸಿಲ್ಲ. ಕಾರ್ಯಕರ್ತರ ಇಂತಹ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.