ADVERTISEMENT

ಭದ್ರತಾ ವೈಫಲ್ಯ ಒಪ್ಪುತ್ತೇವೆ, ತಪ್ಪಿದ್ದರೆ ಪ್ರತಾಪ ಸಿಂಹಗೂ ಶಿಕ್ಷೆ: ಮುನಿಸ್ವಾಮಿ

'ಉಗ್ರಗಾಮಿಗಳು ಹಾಗೂ ನಕ್ಸಲರ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 12:37 IST
Last Updated 15 ಡಿಸೆಂಬರ್ 2023, 12:37 IST
   

ಕೋಲಾರ: ‘ಸಂಸತ್ತಿನ ಮೇಲೆ ಈ ಹಿಂದೆ ದಾಳಿ ನಡೆದ ದಿನವೇ ಲೋಕಸಭೆ ಒಳಗೆ ನುಗ್ಗಿರುವ ಕೃತ್ಯ ಗಮನಿಸಿದರೆ ಉಗ್ರಗಾಮಿಗಳು ಹಾಗೂ ನಕ್ಸಲರ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತನಿಖೆ ನಡೆಯುತ್ತಿದ್ದು, ಪ್ರತಾಪಸಿಂಹ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನೂ ತನಿಖೆಗೆ ಒಳಪಡಿಸಲಾಗುತ್ತದೆ. ತಪ್ಪೆಸಗಿದ್ದರೆ ಪ್ರತಾಪ ಸಿಂಹ ಅವರಿಗೂ ಶಿಕ್ಷೆ ಆಗುತ್ತದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನವರು ರಾಜಕೀಯ ಬೆರೆಸಬಾರದು’ ಎಂದರು.

‘ಲೋಕಸಭೆಯಲ್ಲಿ ಭದ್ರತಾ ವೈಫಲ್ಯವನ್ನು ನಾವು ಒಪ್ಪಿಕೊಳ್ಳುತ್ತೇವೆ. ಇನ್ನೂ ಉನ್ನತಮಟ್ಟದ ಭದ್ರತಾ ವ್ಯವಸ್ಥೆಯ ಅಗತ್ಯವಿದೆ. ಒಳಗೆ ನುಗ್ಗಿದವರನ್ನು ನಾನು, ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಇತರರು ಹಿಡಿದು ಕೊಡಲು ಸಹಾಯ ಮಾಡಿದೆವು’ ಎಂದು ಹೇಳಿದರು

ADVERTISEMENT

‘ಕಾಂಗ್ರೆಸ್‌ ಪಕ್ಷದ ಸರ್ಕಾರವಿದ್ದಿದ್ದರೆ ಆರೋಪಿಗಳನ್ನು ಬಂಧಿಸಲು ವರ್ಷ ತೆಗೆದುಕೊಳ್ಳುತ್ತಿತ್ತು. ಈಚೆಗೆ ರಾಜ್ಯದ ವಿಧಾನಸಭೆಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿಯೊಬ್ಬು ಶಾಸಕರ ಸೀಟಿನಲ್ಲಿ ಕುಳಿತಿರಲಿಲ್ಲವೇ? ಆಗ ಏನು ಮಾಡಿದರು’ ಎಂದು ಪ್ರಶ್ನಿಸಿದರು.

‘ಪ್ರಧಾನಿ ಮೋದಿ ಅವರ ಖ್ಯಾತಿಯನ್ನು ಕುಗ್ಗಿಸಲು ನಡೆಸಿರುವ ಕೃತ್ಯವಿದು. ಈಚೆಗೆ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶ ಸಹಿಸಲು ಸಾಧ್ಯವಾಗದೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಪಿತೂರಿ ನಡೆಯುತ್ತಿದೆ. ಮೈಸೂರು ಸಂಸದ ಪ್ರತಾಪಸಿಂಹ ಅವರನ್ನು ಸೋಲಿಸಲು ಪ್ರಯತ್ನ ನಡೆಯುತ್ತಿದೆ. ಪ್ರತಾಪಸಿಂಹ ದೇಶಪ್ರೇಮಿ. ಯಾರೇ ಪಾಸ್‌ ಕೇಳಿದಾಗ ಕೆಲ ಮಾಹಿತಿ ಪಡೆದುಕೊಂಡು ಕೊಡುತ್ತೇವೆ. ಇನ್ನುಮುಂದೆ ನೂರು ಬಾರಿ ಯೋಚನೆ ಮಾಡಿ ಕೊಡಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಹೇಳಿದರು.

‘ಯಾರೋ ಹಣ ಕೊಡುತ್ತಾರೆ ಎಂದು ಯುವಕರು ಇಂಥ ಕೃತ್ಯಕ್ಕೆ ಇಳಿಯಬಾರದು. ಅಕಸ್ಮಾತ್‌ ಭದ್ರತಾ ಸಿಬ್ಬಂದಿ ಆ ಯುವಕರತ್ತ ಶೂಟ್‌ ಮಾಡಿದ್ದರೆ ಏನಾಗುತಿತ್ತು’ ಎಂದು ಪ್ರಶ್ನಿಸಿದರು.

‘ಪ್ರತಾಪಸಿಂಹ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಎನ್ನಲು ಸಿದ್ದರಾಮಯ್ಯ ಏನು ಪ್ರಧಾನಿಯೇ, ಗೃಹ ಸಚಿವರೇ, ತನಿಖಾಧಿಕಾರಿಯೇ? ಕಾಂಗ್ರೆಸ್‌ನವರು ಚೀನಾ, ಪಾಕಿಸ್ತಾನಕ್ಕೆ ದೇಶದ ಜಾಗ ಬಿಟ್ಟುಕೊಟ್ಟವರು. ಯಾವುದೋ ಧರ್ಮದವರನ್ನು ಮೆಚ್ಚಿಸಲು ದೇಶವನ್ನೇ ಭಾಗ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಟಿಪ್ಪು ಹೆಸರಿಟ್ಟರೆ ಉಗ್ರ ಹೋರಾಟ’

‘ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡಬಾರದು. ಆತನೊಬ್ಬ ಖಳನಾಯಕ, ಮತಾಂತರ ಮಾಡಲು ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡ ಕೊಲೆಗಾರ. ಅಂಥ ಕ್ರೂರಿಯ ಹೆಸರು ಇಟ್ಟರೆ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಮುನಿಸ್ವಾಮಿ ಎಚ್ಚರಿಕೆ ನೀಡಿದರು.

‘ಐದು ಗ್ಯಾರಂಟಿಗಳ ಸುಳ್ಳು ಹೇಳಿ ರಾಜ್ಯದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್‌ನವರು ತಾಕತ್ತಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಎದುರು ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಘೋಷಿಸಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.