ರೇವಾ: ಪತಿ ಜತೆ ವಿಹಾರಕ್ಕೆ ಬಂದಿದ್ದ ನವ ವಿವಾಹಿತೆ ಮೇಲೆ ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಶುಕ್ರವಾರ ಏಳು ಜನರನ್ನು ಬಂಧಿಸಿದ್ದಾರೆ.
ಈ ಕೃತ್ಯ ಗುಢ್ ತಾಲ್ಲೂಕಿನಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಏಳು ಜನರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಿದ್ದೇವೆ’ ಎಂದು ರೇವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ಮಾಹಿತಿ ನೀಡಿದರು.
‘ಸಂತ್ರಸ್ತೆಯ ಪತಿಯನ್ನು ಒತ್ತೆಯಾಗಿಸಿಕೊಂಡು ಆರೋಪಿಗಳು ಈ ದುಷ್ಕೃತ್ಯ ಎಸಗಿದ್ದಾರೆ’ ಎಂದು ಅವರು ತಿಳಿಸಿದರು.
‘ಮಹಿಳೆಯ ವಿವಾಹ ಇತ್ತೀಚೆಗಷ್ಟೇ ನಡೆದಿದೆ. ದಂಪತಿಯು 19– 20ರ ವಯೋಮಾನದವರಾಗಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದಾರೆ’ ಎಂದು ರೇವಾದ ಡಿಎಸ್‌ಪಿ ಹಿಮಾಲಿ ಪಾಠಕ್ ಹೇಳಿದರು. ಆರೋಪಿಗಳು ಸಾಮೂಹಿಕ ಅತ್ಯಾಚಾರದ ವಿಡಿಯೊ ಮಾಡಿಕೊಂಡಿದ್ದಾರೆ ಎಂದೂ ಅವರು ತಿಳಿಸಿದರು.
ಒಬ್ಬನ ಕೈ, ಎದೆ ಮೇಲೆ ಹಚ್ಚೆ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಐವರು ಆರೋಪಿಗಳ ಪೈಕಿ ಒಬ್ಬನ ಕೈ ಮತ್ತು ಎದೆಯ ಮೇಲೆ ಹಚ್ಚೆಗಳಿದ್ದವು ಎಂದು ಸಂತ್ರಸ್ತೆ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
‘ಇದು ಸೂಕ್ಷ್ಮ ಪ್ರಕರಣವಾಗಿದ್ದು, ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸದೆ ತನಿಖೆ ನಡೆಸುತ್ತಿದ್ದೇವೆ. ತನಿಖೆಯ ಭಾಗವಾಗಿ 100ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದೇವೆ’ ಎಂದು ಡಿಎಸ್‌ಪಿ ವಿವರಿಸಿದರು.
‘ದಂಪತಿ ಮಂಗಳವಾರ ಮಧ್ಯಾಹ್ನ 1.30 ಗಂಟೆಗೆ ಗುಡ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಸಿಬ್ಬಂದಿ ಮತ್ತು ನಾನು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ, ಅದೇ ದಿನ ರಾತ್ರಿ 7 ಗಂಟೆಗೆ ಎಫ್‌ಐಆರ್ ದಾಖಲಿಸಲಾಯಿತು’ ಎಂದು ಅವರು ಮಾಹಿತಿ ನೀಡಿದರು.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಇತರ ಆರೋಪಗಳಡಿ ಪ್ರಕರಣ ದಾಖಲಾಗಿದೆ.
ಜಂಗಲ್ ರಾಜ್: ಕಾಂಗ್ರೆಸ್ ಟೀಕೆ ಘಟನೆ ಸಂಬಂಧ ರಾಜ್ಯದ ಬಿಜೆಪಿ ಸರ್ಕಾರವನ್ನು ಮಧ್ಯಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷ ಜಿತು ಪಠವಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಘಟನೆ ನಡೆದು ಎರಡು ದಿನಗಳಾದರೂ ಆ ಕುರಿತ ಮಾಹಿತಿಯನ್ನು ಏಕೆ ಬಹಿರಂಗಪಡಿಸಲಿಲ್ಲ. ಹಾಗದರೇ ಇದೇನು ಜಂಗಲ್ ರಾಜ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ. ‘ಈ ಘಟನೆಯು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಗೃಹ ಇಲಾಖೆಯನ್ನು ಜಂಗಲ್ ರಾಜ್ ಇಲಾಖೆ ಎಂದು ಮರುನಾಮಕರಣ ಮಾಡಬೇಕು’ ಎಂದು ಅವರು ಟೀಕಿಸಿದ್ದಾರೆ. ‘ಸಂತ್ರಸ್ತೆಯ ಪತಿಯನ್ನು ಕಟ್ಟಿಹಾಕಿ ಅವರ ಮುಂದೆಯೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚರ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿದ್ದು ನಿತ್ಯ 18ರಿಂದ 20 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.