ADVERTISEMENT

ಮಧ್ಯಪ್ರದೇಶ | ಬಸ್‌ ಪಲ್ಟಿ– ಇಬ್ಬರು ವಲಸೆ ಕಾರ್ಮಿಕರ ಸಾವು

ದೆಹಲಿಯಿಂದ ತಿಕಮ್‌ಗಡಕ್ಕೆ ಹೊರಟಿದ್ದ ಬಸ್‌

ಪಿಟಿಐ
Published 20 ಏಪ್ರಿಲ್ 2021, 12:06 IST
Last Updated 20 ಏಪ್ರಿಲ್ 2021, 12:06 IST
ಮಧ್ಯಪ್ರದೇಶದ ಗ್ವಾಲಿಯರ್‌ ಬಳಿ ಮಂಗಳವಾರ ಬಸ್‌ ಪಲ್ಟಿಯಾಗಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಬಸ್‌ ದೆಹಲಿಯಿಂದ ಮಧ್ಯಪ್ರದೇಶದ ತಿಕಮ್‌ಗಡಕ್ಕೆ ತೆರಳುತ್ತಿತ್ತು –ಪಿಟಿಐ ಚಿತ್ರ
ಮಧ್ಯಪ್ರದೇಶದ ಗ್ವಾಲಿಯರ್‌ ಬಳಿ ಮಂಗಳವಾರ ಬಸ್‌ ಪಲ್ಟಿಯಾಗಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಬಸ್‌ ದೆಹಲಿಯಿಂದ ಮಧ್ಯಪ್ರದೇಶದ ತಿಕಮ್‌ಗಡಕ್ಕೆ ತೆರಳುತ್ತಿತ್ತು –ಪಿಟಿಐ ಚಿತ್ರ   

ಗ್ವಾಲಿಯರ್‌: ಮಧ್ಯಪ್ರದೇಶದ ಗ್ವಾಲಿಯರ್‌ ಜಿಲ್ಲೆಯ ಜೌರಾಸಿ ಘಾಟ್‌ನಲ್ಲಿ ಬಸ್‌ವೊಂದು ಪಲ್ಪಿಯಾದ ಪರಿಣಾಮ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟು, ಇತರ 8 ಜನರು ಗಾಯಗೊಂಡ ಘಟನೆ ಮಂಗಳವಾರ ಸಂಭವಿಸಿದೆ.

ಈ ಬಸ್‌ ದೆಹಲಿಯಿಂದ ಮಧ್ಯಪ್ರದೇಶದ ತಿಕಮ್‌ಗಡಕ್ಕೆ ತೆರಳುತ್ತಿತ್ತು.

‘ಬಸ್‌ನಲ್ಲಿ ಅದರ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಪ್ರಯಾಣಿಕರಿದ್ದರು. ಈ ಬಸ್‌ ಗ್ವಾಲಿಯರ್‌–ಝಾನ್ಸಿ ಹೆದ್ದಾರಿಯಲ್ಲಿನ ಜೌರಾಸಿ ಘಾಟ್‌ನಲ್ಲಿ ತಿರುವೊಂದರಲ್ಲಿ ಬೆಳಿಗ್ಗೆ ಪಲ್ಟಿಯಾಯಿತು’ ಎಂದುಗ್ವಾಲಿಯರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಸಂಘಿ ತಿಳಿಸಿದರು.

ADVERTISEMENT

‘ಗಾಯಗೊಂಡವರನ್ನು ಗ್ವಾಲಿಯರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರನ್ನು ಬೇರೆ ಬಸ್‌ಗಳ ಮೂಲಕ ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಸಂಘಿ ತಿಳಿಸಿದರು.

‘ಬಸ್‌ನಲ್ಲಿ 100ಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಸಾಕಷ್ಟು ಸಂಖ್ಯೆಯ ಜನರು ಚಾವಣಿ ಮೇಲೆ ಕುಳಿತಿದ್ದರು. ದೆಹಲಿಯಿಂದ ತಿಕಮ್‌ಗಡಕ್ಕೆ ಪ್ರಯಾಣಿಸುವವರಿಂದ ನಿರ್ವಾಹಕ ತಲಾ ₹ 700 ಪಡೆದಿದ್ದ’ ಎಂದು ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗಣಪತ್‌ಲಾಲ್‌ ಎಂಬುವವರು ಹೇಳಿದ್ದಾರೆ.

‘ಮಾರ್ಗಮಧ್ಯೆ ಸೋಮವಾರ ರಾತ್ರಿ ರಾಜಸ್ಥಾನದ ಧೋಲ್‌ಪುರ ಎಂಬಲ್ಲಿ ಊಟಕ್ಕಾಗಿ ಬಸ್‌ ಕೆಲ ಕಾಲ ತಂಗಿತ್ತು. ಆಗ, ಬಸ್ ಚಾಲಕ ಸೇರಿದಂತೆ ಬಸ್‌ನ ಇತರ ಸಿಬ್ಬಂದಿ ಮದ್ಯ ಸೇವನೆ ಮಾಡಿದ್ದರು. ಹೀಗಾಗಿ ಗ್ವಾಲಿಯರ್‌ ಬಳಿ ಚಾಲಕ ನಿಯಂತ್ರಣ ಕಳೆದುಕೊಂಡ ಕಾರಣ ಬಸ್‌ ಪಲ್ಟಿಯಾಯಿತು. ಇದಕ್ಕೂ ಮುನ್ನ ಧೋಲ್‌ಪುರದಲ್ಲಿ ಟ್ರಕ್‌ವೊಂದಕ್ಕೆ ಬಸ್‌ ಡಿಕ್ಕಿಯಾಗಿತ್ತು’ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.