ನವದೆಹಲಿ: ಪ್ರತಿಪಕ್ಷ ಮೈತ್ರಿಕೂಟ 'ಇಂಡಿಯಾ'ದ 20 ಸಂಸರನ್ನೊಳಗೊಂಡ ನಿಯೋಗವು ಇದೇ ಜುಲೈ 29ರಿಂದ ಎರಡು ದಿನಗಳ ಕಾಲ ಮಣಿಪುರಕ್ಕೆ ಭೇಟಿ ನೀಡಲಿದೆ.
'ಈ ಹಿಂದೆಯೇ ಮಣಿಪುರಕ್ಕೆ ಭೇಟಿ ನೀಡಲು ವಿಪಕ್ಷ ನಾಯಕರು ಬಯಸಿದ್ದು, ಅನುಮತಿ ಸಿಗದ ಕಾರಣ ಭೇಟಿ ನೀಡಿರಲಿಲ್ಲ. ಜುಲೈ 29 ಮತ್ತು 30ರ ವಾರಾಂತ್ಯದಂದು 'ಇಂಡಿಯಾ' ಮೈತ್ರಿಕೂಟದ 20 ಸಂಸದರು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಭೇಟಿಯ ವೇಳೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಲಿದ್ದಾರೆ' ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ತಿಳಿಸಿದ್ದಾರೆ.
ಜೂನ್ 30ರಂದು ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡಿದ್ದರು. ಇಂಫಾಲ್, ಚುರಾಚಂದ್‌ಪುರ ಮತ್ತು ಮೊಯಿರಾಂಗ್‌ನಲ್ಲಿನ ವಿವಿಧ ಪರಿಹಾರ ಶಿಬಿರಗಳಿಗೆ ತೆರಳಿ ಜನರೊಂದಿಗೆ ಸಂವಾದ ನಡೆಸಿದ್ದರು. ನಂತರ ರಾಜ್ಯಪಾಲರಾದ ಅನುಸೂಯಾ ಊಕಿ ಅವರನ್ನು ಭೇಟಿ ಮಾಡಿ ಶಾಂತಿ ಕಾಪಾಡುವಂತೆ ಮನವಿ ಸಲ್ಲಿಸಿದ್ದರು.
ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನ ಉಭಯ ಸದನದಲ್ಲಿ ಚರ್ಚೆ ನಡೆಸಬೇಕು ಮತ್ತು ಈ ಕುರಿತು ಪ್ರಧಾನಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಅಲ್ಲದೇ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ನಿರ್ಧರಿಸಿ ಸ್ಪೀಕರ್‌ಗೆ ಮನವಿ ಸಲ್ಲಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.