ADVERTISEMENT

ಹಸ್ತಾಂತರ ವೇಳೆ ಅನ್ಸಾರಿಗೆ ಆಹಾರ, ನೀರು ನೀಡಿಲ್ಲ: ಸಹೋದರ ಅಫ್ಜಲ್‌ ಆರೋಪ

ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ: ಉತ್ತರ ಪ್ರದೇಶ ಸರ್ಕಾರ ಹೇಳಿಕೆ

ಪಿಟಿಐ
Published 7 ಏಪ್ರಿಲ್ 2021, 9:04 IST
Last Updated 7 ಏಪ್ರಿಲ್ 2021, 9:04 IST
ಅಫ್ಜಲ್‌ ಅನ್ಸಾರಿ   –ಪಿಟಿಐ ಚಿತ್ರ
ಅಫ್ಜಲ್‌ ಅನ್ಸಾರಿ   –ಪಿಟಿಐ ಚಿತ್ರ   

ಬಲ್ಲಿಯಾ, ಉತ್ತರ ಪ್ರದೇಶ: ‘ಪಂಜಾಬ್‌ನಿಂದ ಬಾಂದಾ ಜೈಲಿಗೆ ಕರೆತರುವ ವೇಳೆ ಮುಖ್ತಾರ್ ಅನ್ಸಾರಿಯನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಈ ರೀತಿ ಚಿತ್ರಹಿಂಸೆ ನೀಡುವ ಬದಲು ಮಾರ್ಗಮಧ್ಯೆಯೇ ಆತನನ್ನು ಗುಂಡಿಕ್ಕಿ ಕೊಂದಿದ್ದರೆ ಒಳ್ಳೆಯದಿತ್ತು’ ಎಂದು ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್‌ ಅನ್ಸಾರಿ ಸಹೋದರ, ಅಫ್ಜಲ್‌ ಅನ್ಸಾರಿ ಬುಧವಾರ ಆರೋಪಿಸಿದ್ದಾರೆ.

ಅಫ್ಜಲ್‌ ಅನ್ಸಾರಿ ಅವರು ಗಾಜಿಪುರದ ಬಿಎಸ್‌ಪಿ ಸಂಸದ. ‘ಪಂಜಾಬ್‌ನಿಂದ ಬಾಂದಾಗೆ 15 ಗಂಟೆಗಳ ಪ್ರಯಾಣ. ಈ ಪ್ರಯಾಣದ ಅವಧಿಯಲ್ಲಿ ಮುಖ್ತಾರ್‌ಗೆ ಆಹಾರ, ನೀರು ನೀಡಿಲ್ಲ. ಆತನಿಗೆ ವೈದ್ಯಕೀಯ ನೆರವನ್ನೂ ನಿರಾಕರಿಸಲಾಗಿದೆ. ಈ ಕಾರಣದಿಂದ ಮುಖ್ತಾರ್‌ ಅಸ್ವಸ್ಥಗೊಂಡು, ಬಾಂದಾ ಜೈಲು ತಲುಪುವಷ್ಟರಲ್ಲಿ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ’ ಎಂದೂ ಅಫ್ಜಲ್‌ ಆರೋಪಿಸಿದ್ದಾರೆ.

‘ಬಾಂದಾ ಜೈಲಿಗೆ ಕರೆತರುವ ವೇಳೆ ಅವರಿಗೆ ಚಿತ್ರಹಿಂಸೆ ನೀಡಲಾಗಿದೆ, ಆಹಾರ, ನೀರು ಸಹ ನೀಡಿಲ್ಲ’ ಎಂಬ ವಿಷಯ ತಮಗೆ ಹೇಗೆ ಗೊತ್ತಾಯಿತು ಎಂಬ ಬಗ್ಗೆ ಅಫ್ಜಲ್‌ ಅವರು ವಿವರಣೆ ನೀಡಿಲ್ಲ.

ADVERTISEMENT

‘ಬಾಂದಾ ವೈದ್ಯಕೀಯ ಕಾಲೇಜಿನ ವೈದ್ಯರು ಮುಖ್ತಾರ್ ಅನ್ಸಾರಿಯನ್ನು ಜೈಲಿನಲ್ಲಿ ಪರೀಕ್ಷಿಸಿದ್ದು, ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ’ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

‘ಮುಖ್ತಾರ್‌ ಅನ್ಸಾರಿಗೆ ಕೋವಿಡ್‌–19ಗೆ ಸಂಬಂಧಿಸಿದ ಪರೀಕ್ಷೆ ನಡೆಸಲಾಗುವುದು. ಸುಪ್ರೀಂಕೋರ್ಟ್‌ ಆದೇಶದನ್ವಯ, ಜಿಲ್ಲಾಡಳಿತ ಹಾಗೂ ಮುಖ್ಯವೈದ್ಯಾಧಿಕಾರಿ ನೆರವಿನೊಂದಿಗೆ ಅನ್ಸಾರಿಗೆ ಆರೋಗ್ಯ ಸೇವೆ ಒದಗಿಸಲಾಗುವುದು’ ಎಂದೂ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.