ADVERTISEMENT

ಮುಂಬೈ ಕಟ್ಟಡ ಕುಸಿತ: ಒಂದೇ ಕುಟುಂಬದ 9 ಮಂದಿ ಸಾವು, ₹5 ಲಕ್ಷ ಪರಿಹಾರ ಧನ ಘೋಷಣೆ

ಪಿಟಿಐ
Published 10 ಜೂನ್ 2021, 10:14 IST
Last Updated 10 ಜೂನ್ 2021, 10:14 IST
ಮುಂಬೈನ ಮಲ್ವಾನಿ ಪ್ರದೇಶದಲ್ಲಿ ಕಟ್ಟಡ ಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿ                               –ರಾಯಿಟರ್ಸ್‌ ಚಿತ್ರ
ಮುಂಬೈನ ಮಲ್ವಾನಿ ಪ್ರದೇಶದಲ್ಲಿ ಕಟ್ಟಡ ಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿ                               –ರಾಯಿಟರ್ಸ್‌ ಚಿತ್ರ   

ಮುಂಬೈ: ಮಹಾರಾಷ್ಟ್ರದ ಮಲ್ವಾನಿ ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ 8 ಮಕ್ಕಳು ಸೇರಿದಂತೆ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ. 7 ಮಂದಿಗೆ ಗಾಯಗಳಾಗಿವೆ. ಈ ಘಟನೆಯಲ್ಲಿ ಒಂದೇ ಕುಟುಂಬದ 9 ಮಂದಿ ಸಾವಿಗೀಡಾಗಿದ್ದಾರೆ.

ರಫೀಕ್‌ ಶೇಖ್‌ ಅವರು ಹಾಲು ತರಲೆಂದು ಮನೆಯಿಂದ ಹೊರಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಈ ಅವಘಡದಲ್ಲಿ ಶೇಖ್‌ ಅವರ ಪತ್ನಿ, ಸಹೋದರ ಮತ್ತು ಅವರ ಪತ್ನಿ ಹಾಗೂ ಎರಡು ಕುಟುಂಬದ ಆರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಮೃತ‍ಪಟ್ಟಿದ್ದಾರೆ. ಆದರೆ ಶೇಖ್‌ ಅವರ 16 ವರ್ಷದ ಮಗ ಅಪಾಯದಿಂದ ಪಾರಾಗಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಬಾಲಕನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಅಬ್ದುಲ್‌ ಹಮೀದ್ ರಸ್ತೆಯ ನ್ಯೂ ಕಲೆಕ್ಟರ್ ಕಾಂಪೌಂಡ್‌ನಲ್ಲಿ ಬುಧವಾರ ರಾತ್ರಿ 11.15ರ ಸುಮಾರಿಗೆ ಮೂರು ಅಂತಸ್ತಿನ ಕಟ್ಟಡವು ಒಂದು ಅಂತಸ್ತಿನ ಕಟ್ಟಡದ ಮೇಲೆ ಕುಸಿದಿದೆ.

ADVERTISEMENT

ಪರಿಹಾರ ಘೋಷಣೆ: ‘ಮಲ್ವಾನಿ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ₹5 ಲಕ್ಷ ನೀಡಲಾಗುವುದು’ ಎಂದು ಮಹಾರಾಷ್ಟ್ರ ಸರ್ಕಾರ ಗುರುವಾರ ಘೋಷಿಸಿದೆ. ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದೆ.

ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸಂತಾಪ ಸೂಚಿಸಿದ್ದಾರೆ. ಈ ಬಳಿಕ ಶತಾಬ್ಧಿ ಆಸ್ಪತ್ರೆಗೆ ಭೇಟಿ ನೀಡಿದ ಠಾಕ್ರೆ, ಸಂತ್ರಸ್ತರ ಆರೋಗ್ಯ ವಿಚಾರಿಸಿದ್ಧಾರೆ. ಮುಖ್ಯಮಂತ್ರಿ ಅವರೊಂದಿಗೆ ಪರಿಸರ ಸಚಿವ ಆದಿತ್ಯ ಠಾಕ್ರೆ, ಬಿಎಂಸಿ ಮುಖ್ಯಸ್ಥ ಚಹಲ್‌, ಮೇಯರ್‌ ಕಿಶೋರ್‌ ಪಡ್ನೇಕರ್‌ ಕೂಡ ಆಸ್ಪತ್ರೆಗೆ ಆಗಮಿಸಿದ್ದರು’ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.