ADVERTISEMENT

ಒಎನ್‌ಜಿಸಿ ಘಟಕದಲ್ಲಿ ಬೆಂಕಿ ಅವಘಡ: ನಾಲ್ವರ ಸಾವು

ಅನಿಲ ಸೋರಿಕೆಯಿಂದ ಸ್ಫೋಟ: ಮೂವರಿಗೆ ಗಾಯ

ಏಜೆನ್ಸೀಸ್
Published 3 ಸೆಪ್ಟೆಂಬರ್ 2019, 19:45 IST
Last Updated 3 ಸೆಪ್ಟೆಂಬರ್ 2019, 19:45 IST
ಒಎನ್‌ಜಿಸಿ ಘಟಕದಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡ  ಪಿಟಿಐ ಚಿತ್ರ
ಒಎನ್‌ಜಿಸಿ ಘಟಕದಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡ  ಪಿಟಿಐ ಚಿತ್ರ   

ಮುಂಬೈ (ಪಿಟಿಐ): ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಸಂಸ್ಕರಣಾ ಘಟಕದಲ್ಲಿ ಮಂಗಳವಾರ ಸಂಭವಿಸಿದ ಭಾರಿ ಅಗ್ನಿ ಅನಾಹುತದಲ್ಲಿ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ (ಸಿಐಎಸ್‌ಎಫ್‌) ಮೂವರು ಸಿಬ್ಬಂದಿ ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ.

ನವಿ ಮುಂಬೈ ಸಮೀಪದ ಉರಾನ್‌ ಘಟಕದಲ್ಲಿ ಬೆಳಿಗ್ಗೆ 6.47ಕ್ಕೆ ಈ ಅವಘಡ ಸಂಭವಿಸಿದೆ. ಎರಡು ಗಂಟೆಗಳಲ್ಲಿ ಬೆಂಕಿಯನ್ನು ನಂದಿಸಲಾಗಿದೆ. ಈ ದುರಂತದಲ್ಲಿ ಮೂವರು ಗಾಯಗೊಂಡಿದ್ದು, ಇವರು ಸಹ ಸಿಐಎಸ್‌ಎಫ್‌ಗೆ ಸೇರಿದ್ದಾರೆ ಎಂದು ಒಎನ್‌ಜಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿ ಅವಘಡದಿಂದ ತೈಲ ಸಂಸ್ಕರಣಾ ಘಟಕದ ಕಾರ್ಯನಿರ್ವಹಣೆ ಮೇಲೆ ಯಾವುದೇ ರೀತಿ ಪರಿಣಾಮ ಬೀರಿಲ್ಲ. ಅನಿಲ ಪೂರೈಕೆ ವ್ಯವಸ್ಥೆಯನ್ನು ಗುಜರಾತ್‌ನ ಸುರತ್‌ ಜಿಲ್ಲೆಯ ಹಝಿರಾ ಘಟಕಕ್ಕೆ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಈರಣ್ಣ ನಾಯಕ್‌, ಸತೀಶ್‌ ಪ್ರಸಾದ್‌ ಕುಶ್ವಾಹ್‌ ಮತ್ತು ಎಂ.ಕೆ. ಪಾಸ್ವಾನ್‌ ಸಾವಿಗೀಡಾದವರು. ಅನಿಲ ಸೋರಿಕೆಯಾಗುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಿಂದ ಇವರು ಸಾವಿಗೀಡಾಗಿದ್ದಾರೆ’ ಎಂದು ಸಿಐಎಸ್‌ಎಫ್‌ ಉಪ ಇನ್‌ಸ್ಪೆಕ್ಟರ್‌ ಜನರಲ್‌ ನೀಲಿಮಾ ಸಿಂಗ್‌ ತಿಳಿಸಿದ್ದಾರೆ.

‘ಒಎನ್‌ಜಿಸಿ ಘಟಕದಲ್ಲಿ ಅನಿಲ ಸೋರಿಕೆಯಾಗುತ್ತಿರುವ ಬಗ್ಗೆ ಸಿಐಎಸ್‌ಎಫ್‌ ಅಗ್ನಿಶಾಮಕ ಠಾಣೆಗೆ ಬೆಳಿಗ್ಗೆ ಮಾಹಿತಿ ಬಂದಿತ್ತು. ಸಿಐಎಸ್‌ಎಫ್‌ ಸಿಬ್ಬಂದಿ ಮತ್ತು ಇತರರು ಸ್ಥಳಕ್ಕೆ ಧಾವಿಸಿ ಸೋರಿಕೆಯಾಗುತ್ತಿರುವ ಸ್ಥಳವನ್ನು ಪತ್ತೆ ಮಾಡಿದರು. ಸೋರಿಕೆಯಾಗುತ್ತಿದ್ದ ವಾಲ್ವ್‌ ಬಂದ್‌ ಮಾಡುವಲ್ಲಿ ಯಶಸ್ವಿಯಾದ ಈ ಸಿಬ್ಬಂದಿ, ಇತರ ಸ್ಥಳಗಳನ್ನು ಸಹ ಪರಿಶೀಲಿಸುತ್ತಿದ್ದರು. ಆಗ ಸ್ಫೋಟ ಸಂಭವಿಸಿ ಮೂವರು ಸಿಬ್ಬಂದಿ ಮತ್ತು ಒಎನ್‌ಜಿಸಿ ಉಪ ವ್ಯವಸ್ಥಾಪಕ ಸಾವಿಗೀಡಾದರು’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.