ADVERTISEMENT

ಸರ್ಕಾರಿ ಮಹಿಳಾ ಹಾಸ್ಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ನಿಂದ ಯುವತಿಯ ಅತ್ಯಾಚಾರ, ಕೊಲೆ

ಸಾವಿತ್ರಿಭಾಯಿ ಫುಲೆ ಸರ್ಕಾರಿ ಮಹಿಳಾ ಹಾಸ್ಟೆಲ್‌ನಲ್ಲಿ 4ನೇ ಮಹಡಿಯಲ್ಲಿ ಘಟನೆ: ಬೆಚ್ಚಿ ಬಿದ್ದ ಮುಂಬೈ: ಆರೋಪಿ ಸೆಕ್ಯೂರಿಟಿ ಗಾರ್ಡ್ ಚಲಿಸುವ ರೈಲಿನ ಎದುರು ಜಿಗಿದು ಆತ್ಮಹತ್ಯೆ

ಪಿಟಿಐ
Published 7 ಜೂನ್ 2023, 10:30 IST
Last Updated 7 ಜೂನ್ 2023, 10:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದಕ್ಷಿಣ ಮುಂಬೈನ ಮರೈನ್ ಡ್ರೈವ್ ಪ್ರದೇಶದಲ್ಲಿರುವ ಸಾವಿತ್ರಿಭಾಯಿ ಫುಲೆ ಸರ್ಕಾರಿ ಮಹಿಳಾ ಹಾಸ್ಟೆಲ್‌ನಲ್ಲಿ 18 ವರ್ಷದ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಹಾಸ್ಟೆಲ್‌ನ ಸೆಕ್ಯೂರಿಟಿ ಗಾರ್ಡ್‌ ಉತ್ತರಪ್ರದೇಶ ಪ್ರತಾಪ್‌ಗಢ ಮೂಲದ ಪ್ರಕಾಶ್ ಕನೋಜಿಯಾ (32) ಅತ್ಯಾಚಾರ, ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು ಆತ ಘಟನೆ ನಂತರ ಚಾರ್ನಿ ರೋಡ್ ನಿಲ್ದಾಣದ ಬಳಿ ರೈಲು ಬರುವಾಗ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಈ ಘಟನೆ ಮರೈನ್ ಡ್ರೈವ್‌ನಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಕೃತ್ಯ ನಡೆಸಿದವರ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಸಮೀಪದ ರೈಲು ಹಳಿಯ ಮೇಲೆ ಹಾಸ್ಟೆಲ್ ಸೆಕ್ಯೂರಿಟಿ ಗಾರ್ಡ್‌ನ ಮೃತದೇಹ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಆತ ಹಾಸ್ಟೆಲ್‌ನ ಹಿಂಬದಿಯಿಂದ ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ADVERTISEMENT

ಮಂಗಳವಾರ ರಾತ್ರಿ ಯುವತಿ ತಂಗಿದ್ದ ಹಾಸ್ಟೆಲ್‌ನ 4ನೇ ಮಹಡಿಯ ಕೋಣೆಯ ಬಳಿ ಸಿಬ್ಬಂದಿ ಹೋಗಿದ್ದಾಗ ಕೋಣೆಯ ಹೊರಗಡೆಯಿಂದ ಚಿಲಕ ಹಾಕಿಕೊಂಡು ಹೋಗಲಾಗಿತ್ತು. ರಕ್ತದ ಕಲೆಗಳನ್ನು ನೋಡಿದ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ಕೃತ್ಯ ನಡೆದಿದ್ದು ಬೆಳಕಿಗೆ ಬಂದಿದೆ.

ಈ ವೇಳೆ ಯುವತಿಯ ಮೃತದೇಹ ರಕ್ತಸಿಕ್ತವಾಗಿ, ನಗ್ನವಾಗಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಯುವತಿ ಮಹಾರಾಷ್ಟ್ರದ ಅಕೊಲಾ ಮೂಲದವರಾಗಿದ್ದರು. ಖಾಸಗಿ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ಕೋರ್ಸ್ ಓದುತ್ತಾ ಅರೆಕಾಲಿಕ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಯುವತಿ ಪಾಲಕರಿಗೆ ಏಕೈಕ ಪುತ್ರಿಯಾಗಿದ್ದರು. ಸುದ್ದಿ ತಿಳಿದು ಹಾಸ್ಟೆಲ್ ಬಳಿ ಬಂದು ಕಣ್ಣೀರು ಹಾಕಿರುವ ಅವರು, ಹಾಸ್ಟೆಲ್ ಸಿಬ್ಬಂದಿ ನಮ್ಮ ಮಗಳನ್ನು 4ನೇ ಮಹಡಿಯ ಕೋಣೆಯಲ್ಲಿ ಏಕಾಂಗಿಯಾಗಿ ಇಟ್ಟಿದ್ದು ಏಕೆ? ಹಾಸ್ಟೆಲ್‌ನವರು ಕಿರುಕುಳ ಕೊಟ್ಟಿದ್ದಾರೆ, ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಸಿಎಂ ಏಕನಾಥ ಶಿಂದೆ ಅವರು, ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಾಸ್ಟೆಲ್ ಸಿಬ್ಬಂದಿ ಕೈವಾಡ ಏನಾದರೂ ಇದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ವಿರೋಧ ಪಕ್ಷಗಳು ಮುಂಬೈನಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ರಕ್ಷಣೆ ಕೊಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.