ADVERTISEMENT

TRP ಹಗರಣ: 2 ಚಾನೆಲ್‌ಗಳ ಮಾಲೀಕರ ಬಂಧನ, ರಿಪಬ್ಲಿಕ್ ಟಿವಿ ಸಿಬ್ಬಂದಿ ವಿಚಾರಣೆ

ಮುಂಬೈ ಪೊಲೀಸ್

ಏಜೆನ್ಸೀಸ್
Published 8 ಅಕ್ಟೋಬರ್ 2020, 16:03 IST
Last Updated 8 ಅಕ್ಟೋಬರ್ 2020, 16:03 IST
ಮುಂಬೈ ಪೊಲೀಸ್ ಕಮಿಷನರ್ ಪರಂ ವೀರ್ ಸಿಂಗ್‌
ಮುಂಬೈ ಪೊಲೀಸ್ ಕಮಿಷನರ್ ಪರಂ ವೀರ್ ಸಿಂಗ್‌    

ಮುಂಬೈ: ಮೂರು ಟಿವಿ ಚಾನೆಲ್‌ಗಳ ಟಿಆರ್‌ಪಿ ವಂಚನೆಯನ್ನು ಮುಂಬೈ ಪೊಲೀಸರು ಬಯಲು ಮಾಡಿದ್ದು, ರಿಪಬ್ಲಿಕ್‌ ಟಿವಿ ನಿರ್ದೇಶಕರಿಗೆ ಸಮನ್ಸ್ ನೀಡಲಾಗಿದೆ.

ಮುಂಬೈ ಅಪರಾಧ ವಿಭಾಗದ ಸಿಐಡಿ ತಂಡ ಆಗಲೇ ಎರಡು ಚಾನೆಲ್‌ಗಳ ಮಾಲೀಕರನ್ನು ಬಂಧಿಸಿದೆ ಹಾಗೂ ಹಗರಣದ ಸಂಬಂಧ ಹಲವು ವ್ಯಕ್ತಿಗಳಿಗೆ ಸಮನ್ಸ್‌ ಹೊರಡಿಸಿದೆ.

ಟಿವಿ ಚಾನೆಲ್‌ ವೀಕ್ಷಕರ ಪ್ರಮಾಣ ಲೆಕ್ಕ ಹಾಕಲು ಬಳಕೆಯಾಗುತ್ತಿರುವ ಮಾನದಂಡ ಟಿಆರ್‌ಪಿ. ಹಂಸ ರಿಸರ್ಚ್‌ ಗ್ರೂಪ್‌ ಪ್ರೈವೆಟ್‌ ಲಿಮಿಟೆಡ್‌ನ ಮಾಜಿ ಉದ್ಯೋಗಗಿಗಳು ಅಗತ್ಯಕ್ಕೆ ತಕ್ಕಂತೆ ಟಿಆರ್‌ಪಿ ಹೊಂದಿಸಿಕೊಡುವ ಕಾರ್ಯದಲ್ಲಿ ಕೈಜೋಡಿಸಿರುವುದು ತನಿಖೆಯಿಂದ ತಿಳಿಯಲಾಗಿದೆ.

ADVERTISEMENT

'ಟಿಆರ್‌ಪಿ ತಿದ್ದುಪಡಿ ಮಾಡುತ್ತಿದ್ದ ಮೂರು ಚಾನೆಲ್‌ಗಳು ರಿಪಬ್ಲಿಕ್‌ ಟಿವಿ, ಫಕ್ತ್ ಮರಾಠಿ ಹಾಗೂ ಬಾಕ್ಸ್‌ ಸಿನಿಮಾ' ಎಂದು ಮುಂಬೈ ಪೊಲೀಸ್ ಕಮಿಷನರ್ ಪರಂ ವೀರ್ ಸಿಂಗ್‌ ಹೇಳಿದ್ದಾರೆ.

ಫಕ್ತ್‌ ಮರಾಠಿ ಮತ್ತು ಬಾಕ್ಸ್‌ ಸಿನಿಮಾ ಮರಾಠಿ ಚಾನೆಲ್‌ಗಳ ಮಾಲೀಕರನ್ನು ಐಪಿಸಿ ಸೆಕ್ಷನ್‌ 409 ಮತ್ತು 420ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

ರಿಪಬ್ಲಿಕ್‌ ಟಿವಿ ಎಡಿಟರ್‌–ಇನ್‌–ಚೀಫ್‌ ಅರ್ನಬ್‌ ಗೋಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಾರಾಷ್ಟ್ರ ಸರ್ಕಾರದ ಕುರಿತು ಮಾಡಿದ ವರದಿಗಳಿಗಾಗಿ ಚಾನೆಲ್‌ನ್ನು ಗುರಿಯಾಗಿಸಿ ನಡೆಸಿರುವ ಪ್ರಯತ್ನ ಇದು ಎಂದಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಬಾರ್ಕ್‌ (ಬ್ರಾಡ್‌ಕಾಸ್ಟ್‌ ಆಡಿಯನ್ಸ್ ರಿಸರ್ಚ್‌ ಕೌನ್ಸಿಲ್‌) ಭಾರತದಲ್ಲಿ ಟಿವಿ ಚಾನೆಲ್‌ಗಳ ವಾರದ ರೇಟಿಂಗ್‌ ಪಾಯಿಂಟ್ಸ್‌ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪ್ರಕರಣದ ಸಂಬಂಧ ಬಾರ್ಕ್‌ ಅಧಿಕಾರಿಗಳನ್ನೂ ಪ್ರಶ್ನಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.