ADVERTISEMENT

ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 944 ಮಿ.ಮೀಟರ್‌ ಮಳೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 5:34 IST
Last Updated 2 ಜುಲೈ 2019, 5:34 IST
   

ಮುಂಬೈ: ದಾಖಲೆಯ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿದ್ದು ಕಳೆದ 24 ಗಂಟೆಗಳಲ್ಲಿ 944 ಮಿ.ಮೀಟರ್‌ ಮಳೆಯಾಗಿದೆ.

ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ944 ಮಿಲಿ ಮೀಟರ್‌ ಮಳೆ ಸುರಿದಿದೆ. 44 ವರ್ಷಗಳ ಹಿಂದೆ 1975ರ ಜುಲೈ ತಿಂಗಳಲ್ಲಿ 375.2 ಮಿಲಿ ಮೀಟರ್ ಮಳೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೂ 241 ಮಿಲಿ ಮೀಟರ್ ಮಳೆಯಾಗಿದೆ. ಇದರ ಪರಿಣಾಮ ಮುಂಬೈನಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.

ADVERTISEMENT

15 ರಿಂದ 64 ಮಿ.ಮೀಟರ್ ಮಳೆಯಾದರೆ ಸಾಧಾರಣ ಮಳೆ, 64 ರಿಂದ 115 ಮಿ.ಮೀಟರ್ ಮಳೆಯಾದರೆ ಹೆಚ್ಚು ಮಳೆ, 115 ರಿಂದ 204 ಮಿ. ಮೀಟರ್ ಮಳೆಯಾದರೆ ಭಾರಿ ಮಳೆ , 204 ಮಿ. ಮೀಟರ್‌ಗೂ ಹೆಚ್ಚು ಮಳೆಯಾದರೆ ಅತ್ಯಧಿಕ ಮಳೆ ಎಂದುಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಮುಂಬೈ ಮತ್ತು ಪುಣೆ ತತ್ತರಿಸಿವೆ. ಮಳೆಯಿಂದಾದ ಅನಾಹುತಗಳಲ್ಲಿ ಈವರೆಗೆ 21 ಮಂದಿ ಮೃತಪಟ್ಟಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರೈಲು ಹಾಗೂ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ತಗ್ಗು ಪ್ರದೇಶಗಳಲ್ಲಿ ವಾಸವಿದ್ದ 1000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಎಚ್ಚರದಿಂದ ಇರುವಂತೆ ಪುಣೆ ಪಾಲಿಕೆಯು ನಾಗರಿಕರಲ್ಲಿ ಮನವಿ ಮಾಡಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆಯೂ, ಅಪಾಯ ಎದುರಾದ ಸನ್ನಿವೇಶದಲ್ಲಿ ಎನ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದವನ್ನು ಸಂಪರ್ಕಿಸುವಂತೆ ಪಾಲಿಕೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.