ADVERTISEMENT

ಕಸಬ್‌ನನ್ನು ಬೆಂಗಳೂರಿನ ಹಿಂದೂ ವಿದ್ಯಾರ್ಥಿಯಂತೆ ಬಿಂಬಿಸಲಾಗಿತ್ತು: ರಾಕೇಶ್ ಮರಿಯಾ

ಕ್ರೈಂ ಬ್ರಾಂಚ್ ಸಿಐಡಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 13:54 IST
Last Updated 18 ಫೆಬ್ರುವರಿ 2020, 13:54 IST
ರಾಕೇಶ್ ಮರಿಯಾ
ರಾಕೇಶ್ ಮರಿಯಾ   

ಮುಂಬೈ: ಮುಂಬೈ ದಾಳಿಯಲ್ಲಿ ಶಾಮೀಲಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಉಗ್ರ ಅಜ್ಮಲ್ ಕಸಬ್‌ನನ್ನು ಬೆಂಗಳೂರಿನ ಹಿಂದೂ ವಿದ್ಯಾರ್ಥಿ ಎಂದು ಬಿಂಬಿಸಲು ಸಂಚು ಹೂಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಈ ವಿಚಾರವನ್ನು 2008ರ ನವೆಂಬರ್‌ 26ರಂದು ಮುಂಬೈಯಲ್ಲಿ ನಡೆದಿದ್ದ ಉಗ್ರ ದಾಳಿಯ ತನಿಖೆ ನಡೆಸಿದ್ದ ಮುಂಬೈಯ ಆಗಿನ ಕ್ರೈಂ ಬ್ರಾಂಚ್ ಸಿಐಡಿ ರಾಕೇಶ್ ಮರಿಯಾ ತಮ್ಮ ‘ಲೆಟ್ ಮಿ ಸೇ ಇಟ್ ನೌ’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ದಾಳಿ ನಡೆಸಿದ ಉಗ್ರರಿಗೆ ಹಿಂದೂ ಹೆಸರುಗಳನ್ನು ನೀಡಲಾಗಿತ್ತು ಮತ್ತು ಪವಿತ್ರ ಕೇಸರಿ ದಾರಗಳನ್ನು ಕೈಗೆ ಕಟ್ಟಲಾಗಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಕಸಬ್‌ನನ್ನು ಬೆಂಗಳೂರಿನ ನಿವಾಸಿ ಸಮೀರ್ ದಿನೇಶ್ ಚೌಧರಿ ಎಂದು ಬಿಂಬಿಸುವುದು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಸಂಚಾಗಿತ್ತು. ಆದರೆ, ಆತ ಪಾಕಿಸ್ತಾನದ ಫರಿದಾಕೋಟ್‌ನವ ಎಂಬುದನ್ನು ಪೊಲೀಸರು ಬಯಲಿಗೆಳೆದಿದ್ದರಿಂದ ಅವರ ಸಂಚು ವಿಫಲವಾಗಿತ್ತು’ ಎಂದು ಮರಿಯಾ ಹೇಳಿದ್ದಾರೆ.

ಇಲ್ಲವಾದಲ್ಲಿ ‘...ಹಿಂದೂ ಉಗ್ರರು ಮುಂಬೈಯಲ್ಲಿ ಹೇಗೆ ದಾಳಿ ನಡೆಸಿದರು ಎಂಬ ಬಗ್ಗೆ ಪತ್ರಿಕೆಗಳಲ್ಲಿ ವಿಧವಿಧದ ಶೀರ್ಷಿಕೆಗಳು ಪ್ರಕಟವಾಗುತ್ತಿದ್ದವು. ಟಿವಿ ಪತ್ರಕರ್ತರು ಬೆಂಗಳೂರಿನಲ್ಲಿ ಆತನ ಕುಟುಂಬದವರು ಮತ್ತು ನೆರೆಯವರನ್ನು ಸಂದರ್ಶಿಸಲು ಯೋಜನೆ ಸಿದ್ಧಪಡಿಸಿಕೊಳ್ಳುತ್ತಿದ್ದರು..., ಎಂದು ಮರಿಯಾ ಬರೆದುಕೊಂಡಿದ್ದಾರೆ.

‘ತಪ್ಪೊಪ್ಪಿಗೆ ವೇಳೆಯೂ ಕಸಬ್ ಹಿಂದೂ ಎಂದೇ ಗುರುತಿಸಿಕೊಂಡಿದ್ದ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ಕೊನೆಗೆ ಉಗ್ರ ಡೇವಿಡ್ ಹೆಡ್ಲಿಯೂ ಈ ಸಂಚಿನ ಬಗ್ಗೆ ದೃಢೀಕರಿಸಿದ್ದಾನೆ’ ಎಂದು ಅವರು ಹೇಳಿದ್ದಾರೆ.

‘...ಪೂರ್ವನಿರ್ಧರಿತ ಸಂಚಿನಂತೆ ನಮಗೆ ಹಿಂದೂ ಹೆಸರಿನ ಗುರುತಿನಚೀಟಿ ನೀಡಲಾಗಿತ್ತು. ನನ್ನ ಗುರುತಿನಚೀಟಿಯಲ್ಲಿ ಬೆಂಗಳೂರಿನ ಅರುಣೋದಯ ಡಿಗ್ರಿ ಕಾಲೇಜಿನ ವಿದ್ಯಾರ್ಥಿ ಸಮೀರ್ ಚೌಧರಿ, ದಿನೇಶ್ ಚೌಧರಿಯವರ ಪುತ್ರ ಎಂದು ಉಲ್ಲೇಖಿಸಲಾಗಿತ್ತು...,’ ಎಂಬುದಾಗಿ ಮುಂಬೈ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ತಪ್ಪೊಪ್ಪಿಗೆ ವೇಳೆ ಕಸಬ್ ತಿಳಿಸಿದ್ದ ಎಂದೂ ಮರಿಯಾ ತಿಳಿಸಿದ್ದಾರೆ.

ಮುಂಬೈ ಸಿದ್ಧಿವಿನಾಯಕ ದೇಗುಲದಿಂದ ದಾರ: ದಾಳಿಕೋರರಿಗೆ ನೀಡುವ ಸಲುವಾಗಿ ಮುಂಬೈಯ ಸಿದ್ಧಿವಿನಾಯಕ ದೇಗುಲದಿಂದ 15–20 ಪವಿತ್ರ ಕೇಸರಿ ದಾರ ಖರೀದಿಸಿದ್ದಾಗಿಯೂ ದೇಗಲದ ಆವರಣದಲ್ಲಿ ವಿಡಿಯೊ ಚಿತ್ರೀಕರಣ ಮಾಡಿದ್ದಾಗಿಯೂ ಪಾಕಿಸ್ತಾನ ಮೂಲಕದ ಅಮೆರಿಕದ ಉಗ್ರ ಡೇವಿಡ್ ಹೆಡ್ಲಿ ಒಪ್ಪಿದ್ದ. ಪಾಕಿಸ್ತಾನಕ್ಕೆ ಹಿಂತಿರುಗಿದ ಬಳಿಕ ಕೇಸರಿ ದಾರಗಳನ್ನು ಸಾಜಿದ್ ಮಿರ್‌ಗೆ ನೀಡಿದ್ದೆ ಎಂದೂ ಆತ ಹೇಳಿದ್ದ. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಶೇಷ ನ್ಯಾಯಾಲಯದ ವಿಚಾರಣೆ ಎದುರಿಸಿದ್ದ ವೇಳೆ ಆತ ಈ ಮಾಹಿತಿ ನೀಡಿದ್ದ ಎಂದು ಮರಿಯಾ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.