ಸಹಜಸ್ಥಿತಿಯತ್ತ ಮರಳಿದ ಪಶ್ಚಿಮ ಬಂಗಾಳದ ಮುರ್ಶಿದಾಬಾದ್
ಕೋಲ್ಕತ್ತ: ಹಿಂಸಾಚಾರ ಪೀಡಿತ ಮುರ್ಶಿದಾಬಾದ್‌ನಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಕಲ್ಕತ್ತಾ ಹೈಕೋರ್ಟ್‌ಗೆ ಗುರುವಾರ ವರದಿ ಸಲ್ಲಿಸಿದೆ.
ಸಮುದಾಯಗಳ ನಡುವಿನ ಗಲಾಟೆ ವೇಳೆ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸಲಾಗಿದೆ ಎಂದು ಆರೋಪಿಸಿ, ಈ ಹಿಂಸಾಚಾರದ ಘಟನೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ತನಿಖೆಗೆ ನೀಡಬೇಕು ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೌಮೆನ್ ಸೇನ್ ಮತ್ತು ರಾಜಾ ಬಸು ಚೌಧರಿ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಹಿಂಸಾಚಾರ ನಡೆದ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಜಿಲ್ಲಾಡಳಿತಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಮಾಹಿತಿಯನ್ನು ಒದಗಿಸಿತು.
ಜಿಲ್ಲೆಯ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಪರಿಗಣಿಸಿ ಮುರ್ಶಿದಾಬಾದ್‌ನಲ್ಲಿ ಸಿಎಪಿಎಫ್ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ) ನಿಯೋಜನೆಯನ್ನು ಇನ್ನೂ ಹೆಚ್ಚಿನ ಅವಧಿಗೆ ವಿಸ್ತರಿಸಬೇಕೆಂದು ಕೇಂದ್ರದ ಪರವಾಗಿ ಹಾಜರಾದ ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿದರು.
ಸುತಿ, ಸಮ್ಸೇರ್‌ಗಂಜ್-ಧುಲಿಯನ್‌ನ ತೊಂದರೆಗೀಡಾದ ಪ್ರದೇಶಗಳಲ್ಲಿ ಪ್ರಸ್ತುತ ಸುಮಾರು 17 ಕಂಪನಿಗಳ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.
ಮತ್ತೊಬ್ಬ ಅರ್ಜಿದಾರರು, ಮನೆ ತೊರೆದ ಜನರು ವಾಪಸ್ ಮರಳುವಂತೆ ರಾಜ್ಯಸರ್ಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಸರ್ಕಾರ ಕೆಲವು ಕುಟುಂಬ ಈಗಾಗಲೇ ಮನೆಗೆ ವಾಪಸ್ ಆಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.