ADVERTISEMENT

ಶಾ ವಿರುದ್ಧ ಕ್ರಮಕ್ಕೆ ಲೀಗ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 17:17 IST
Last Updated 16 ಏಪ್ರಿಲ್ 2019, 17:17 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ರಾಹುಲ್‌ ಗಾಂಧಿಯ ಚುನಾವಣಾ ಪ್ರಚಾರ ರ್‍ಯಾಲಿಯ ಸಂದರ್ಭದಲ್ಲಿ ಹಸಿರು ಬಣ್ಣದ ಬಾವುಟಗಳನ್ನು ಬಳಸಿದ್ದಕ್ಕಾಗಿ ವಯನಾಡ್‌ ಅನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

‘ಶಾ ಅವರು ಆಧಾರರಹಿತ, ದುರುದ್ದೇಶಪೂರಿತ, ಬೇಜವಾಬ್ದಾರಿಯುತ, ಅವಮಾನಕಾರಿ ಮತ್ತು ಕೋಮುವಾದಿ ಹೇಳಿಕೆಯನ್ನು ನೀಡುವ ಮೂಲಕ ಎರಡು ಸಮುದಾಯಗಳ ನಡುವೆ ವೈರತ್ವ ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು’ ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಐಯುಎಂಎಲ್‌ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಲಾಗಿದೆ.

‘ಶಾ ಅವರ ಈ ಹೇಳಿಕೆ ಮುಸ್ಲಿಮರು ಮಾತ್ರವಲ್ಲ ವಯನಾಡ್‌ನ ಜನರಿಗೇ ಮಾಡಿರುವ ಅವಮಾನ. ನಮ್ಮ ಪಕ್ಷದ ಬಾವುಟವನ್ನು ಅವರು ಪಾಕಿಸ್ತಾನದ ಧ್ವಜ ಎಂದು ಬಿಂಬಿಸಿದ್ದಾರೆ. ಜೆಡಿಯು, ಜೆಡಿಎಸ್‌, ಐಎನ್‌ಎಲ್‌ಡಿ, ಆರ್‌ಜೆಡಿ ಮುಂತಾದ ಇತರ ಪಕ್ಷಗಳು ಸಹ ಹಸಿರು ಬಾವುಟ ಹೊಂದಿವೆ. ಶಾ ಅವರು ನಮ್ಮ ಪಕ್ಷದ ಬಾವುಟವನ್ನು ಮಾತ್ರ ಉಲ್ಲೇಖಿಸುವ ಮೂಲಕ ಕೋಮು ದ್ವೇಷವನ್ನು ಬಿತ್ತುವ ಪ್ರಯತ್ನ ಮಾಡಿದ್ದಾರೆ’ ಎಂದು ಐಯುಎಂಎಲ್‌ನ ರಾಷ್ಟ್ರೀಯ ಕಾರ್ಯದರ್ಶಿ ಖೊರ್ರಂ ಎ ಒಮರ್‌ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.