ಲಖನೌ: ಸಮರ್ಥನೀಯ ಕಾರಣ ಇದ್ದಾಗ ಹಾಗೂ ಎಲ್ಲ ಪತ್ನಿಯರನ್ನೂ ಸಮಾನವಾಗಿ ನೋಡಿಕೊಳ್ಳುವುದಿದ್ದರೆ ಮುಸ್ಲಿಂ ವ್ಯಕ್ತಿಯು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಬಹುದು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಫುರ್ಖಾನ್ ಎನ್ನುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಈ ಮಾತು ಹೇಳಿದೆ.
‘ಮುಸ್ಲಿಂ ಕಾಯ್ದೆಯಲ್ಲಿನ ಅವಕಾಶ ಗಳನ್ನು ಗಮನಿಸಿದಾಗ, ಅನಿವಾರ್ಯ ಸಂದರ್ಭಗಳಲ್ಲಿ ಹಾಗೂ ಕೆಲ ಷರತ್ತುಗಳಡಿ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಮದುವೆಯಾಗಲು ಇಸ್ಲಾಂ ಅನುಮತಿ ನೀಡುತ್ತದೆ. ಆದರೆ, ಇಂತಹ ಅವಕಾಶಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕುರ್‌ಆನ್‌ನಲ್ಲಿ ಉಲ್ಲೇಖಿಸಿರುವಂತೆ, ಮುಸ್ಲಿಂ ಕಾಯ್ದೆಯಲ್ಲಿನ ಅವಕಾಶಗಳಿಗೆ ಇದು ವಿರುದ್ಧವಾದುದು ಎಂಬುದು ಗೊತ್ತಿದ್ದರೂ ದುರ್ಬಳಕೆಯಾಗುತ್ತಿದೆ’ ಎಂದು ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ನ್ಯಾಯಪೀಠ ಹೇಳಿದೆ.
‘ಮೊದಲ ಮದುವೆ ಆಗಿದ್ದನ್ನು ಮುಚ್ಚಿಟ್ಟು ಫುರ್ಖಾನ್, ನನ್ನನ್ನು ಮದುವೆಯಾಗಿದ್ದಾನೆ. ಅಲ್ಲದೇ, ಆತನೊಂದಿಗೆ ಸಂಬಂಧವಿರಿಸಿಕೊಂಡಿದ್ದ ವೇಳೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ’ ಎಂದು ಫುರ್ಖಾನ್ ಅವರ ಎರಡನೇ ಪತ್ನಿ ದೂರು ನೀಡಿದ್ದರು.
ಈ ದೂರು ಆಧರಿಸಿ, ಫುರ್ಖಾನ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿತ್ತು. ಮೊರಾದಾಬಾದ್ ಜಿಲ್ಲಾ ನ್ಯಾಯಾಲಯ ಸಮನ್ಸ್ ಕೂಡ ಜಾರಿ ಮಾಡಿತ್ತು.
ಈ ದೋಷಾರೋಪಪಟ್ಟಿ ಹಾಗೂ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಫುರ್ಖಾನ್ ಹೈಕೋರ್ಟ್
ಮೆಟ್ಟಿಲೇರಿದ್ದರು.
‘ನ್ಯಾಯಯುತ ಕಾರಣಕ್ಕಾಗಿ ಬಹುಪತ್ನಿತ್ವಕ್ಕೆ ಕುರ್‌ಆನ್ ಅನುಮತಿ ನೀಡುತ್ತದೆ. ಆದರೆ, ಮುಸ್ಲಿಂ ಪುರುಷರು ತಮ್ಮ ಸ್ವಾರ್ಥಕ್ಕಾಗಿ ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಷರತ್ತುಬದ್ಧ ಬಹುಪತ್ನಿತ್ವ ಕುರಿತು ಕುರ್‌ಆನ್‌ನಲ್ಲಿ ಒಂದು ಬಾರಿ ಮಾತ್ರ ಉಲ್ಲೇಖಿಸಲಾಗಿದೆ’ ಎಂದು ಪೀಠ ಹೇಳಿದೆ.
‘ಐತಿಹಾಸಿಕ ಕಾರಣಗಳಿಂದಾಗಿ ಬಹುಪತ್ನಿತ್ವಕ್ಕೆ ಕುರ್‌ಆನ್ ಅನುಮತಿ ನೀಡಿದೆ. ಆಗ, ಇಸ್ಲಾಂ ವಿಕಸನ
ಗೊಳ್ಳುತ್ತಿದ್ದ ಸಮಯ. ಸಮುದಾಯದ ರಕ್ಷಣೆಗಾಗಿ ಮದೀನಾದಲ್ಲಿ ಅರಬ್ಬರ ಬುಡಕಟ್ಟು ಗುಂಪುಗಳ ನಡುವೆ ನಡೆದ ಸಂಘರ್ಷದ ವೇಳೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ವಿಧವೆಯರಾದರೆ, ಮಕ್ಕಳು ಅನಾಥರಾಗುತ್ತಿ
ದ್ದರು. ಮಕ್ಕಳು ಹಾಗೂ ಮಹಿಳೆಯರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ಷರತ್ತುಬದ್ಧ ಬಹುಪತ್ನಿತ್ವಕ್ಕೆ ಕುರ್‌ಆನ್ ಅನುಮತಿ ನೀಡಿತ್ತು’ ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.
‘ಎಲ್ಲ ಪತ್ನಿಯರನ್ನು ಸಮಾನವಾಗಿ ಕಾಣುವ ಸಾಮರ್ಥ್ಯ ಇಲ್ಲದಿದ್ದರೆ, ಮುಸ್ಲಿಂ ವ್ಯಕ್ತಿಯು ಎರಡನೇ ಮದುವೆ ಮಾಡಿಕೊಳ್ಳುವುದಕ್ಕೆ ಯಾವುದೇ ಹಕ್ಕು ಹೊಂದಿಲ್ಲ ಎಂದು ಮಹಮ್ಮದೀಯ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’ ಎಂದು ಹೇಳಿದೆ.
‘ಅರ್ಜಿದಾರ (ಪತಿ) ತನ್ನನ್ನು ಎರಡನೇ ಮದುವೆ ಮಾಡಿಕೊಂಡಿರುವುದಾಗಿ ಎರಡನೇ ಪತ್ನಿಯು ಹೇಳಿದ್ದಾರೆ. ಇಬ್ಬರೂ ಮುಸ್ಲಿಮರೇ ಆಗಿದ್ದಾರೆ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಹೀಗಾಗಿ ಎರಡನೇ ಮದುವೆಯು ಮಾನ್ಯವಾಗಿದೆ’ ಎಂದು ಪೀಠ ಹೇಳಿದೆ.
‘ಯುಸಿಸಿ: ಪರಿಶೀಲನೆ ಅಗತ್ಯ’
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಕುರಿತು ಪರಿಶೀಲಿಸುವ ಅಗತ್ಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಸಲಹೆ ನೀಡಿದೆ.
ಶ್ರೀಮತಿ ಸರಳಾ ಮುದ್ಗಲ್, ಲಿಲಿ ಥಾಮಸ್ ಹಾಗೂ ಜಾಫರ್ ಅಬ್ಬಾಸ್ ರಸೂಲ್ ಮೊಹಮ್ಮದ್ ಮರ್ಚಂಟ್ ಪ್ರಕರಣಗಳ ತೀರ್ಪಿನಲ್ಲಿ ಯುಸಿಸಿ ಕುರಿತು ನೀಡಿರುವ ಸಲಹೆಗಳನ್ನು ಕೋರ್ಟ್ ಪ್ರಸ್ತಾಪಿಸಿದೆ.
ಅಲ್ಲದೆ, ಸಂವಿಧಾನದ 44ನೇ ವಿಧಿಯು ಕೂಡ ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರತಿಪಾದಿಸಿದೆ ಎಂದೂ ಹೈಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.