ADVERTISEMENT

ಸಂಸ್ಕೃತ ಪ್ರೊಫೆಸರ್ ಫಿರೋಜ್‌ ಖಾನ್‌ಗೆ ಬಿಎಚ್‌ಯು ವಿದ್ಯಾರ್ಥಿಗಳ ಬೆಂಬಲ 

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 6:42 IST
Last Updated 21 ನವೆಂಬರ್ 2019, 6:42 IST
ಶಾಂತಿಯುತ ಪ್ರತಿಭಟನಾ ಮಾರ್ಚ್ ನಡೆಸಿದ ವಿದ್ಯಾರ್ಥಿಗಳು  (ಕೃಪೆ: ಟ್ವಿಟರ್)
ಶಾಂತಿಯುತ ಪ್ರತಿಭಟನಾ ಮಾರ್ಚ್ ನಡೆಸಿದ ವಿದ್ಯಾರ್ಥಿಗಳು (ಕೃಪೆ: ಟ್ವಿಟರ್)   

ನವದೆಹಲಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾ ಧರಮ್ ವಿಗ್ಯಾನ್ (ಎಸ್‌ವಿಡಿವಿ)ಯಲ್ಲಿ ಎರಡು ವಾರಗಳ ಹಿಂದೆಯಷ್ಟೇ ಸಂಸ್ಕೃತ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕವಾಗಿದ್ದ ಫಿರೋಜ್ ಖಾನ್ ಬುಧವಾರ ಅವರ ಊರು ಜೈಪುರಕ್ಕೆ ಮರಳಿದ್ದಾರೆ. ಸಂಸ್ಕೃತ ಕಲಿಸಲು ಮುಸ್ಲಿಂ ಪ್ರೊಫೆಸರ್ ಬೇಡ ಎಂದು ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ ಕಾರಣ ಖಾನ್ ಈ ನಿರ್ಧಾರ ಕೈಗೊಂಡಿದ್ದಾರೆ.

ಡಾ. ಖಾನ್ ನವೆಂಬರ್ 7ರಂದು ಇಲ್ಲಿ ನೇಮಕವಾಗಿದ್ದು ಅಂದಿನಿಂದ ವಿದ್ಯಾರ್ಥಿಗಳು ಪ್ರತಿಭಟನೆ ಶುರುಮಾಡಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ನೊಂದ ಖಾನ್ ಫೋನ್‌ ಸ್ವಿಚ್ ಆಫ್ ಮಾಡಿ ಯಾರ ಸಂಪರ್ಕಕಕ್ಕೂ ಸಿಗದಂತಿದ್ದರು. ಇದೀಗ ತಮ್ಮ ಊರಿಗೆ ಮರಳುವ ಹೊತ್ತಲ್ಲಿ ಅದೇ ವಿಶ್ವವಿದ್ಯಾನಿಲಯದ ಇತರ ವಿದ್ಯಾರ್ಥಿಗಳು ಖಾನ್ ಬೆಂಬಲಕ್ಕೆ ನಿಂತಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಡಾ ಖಾನ್ ಅವರು ಕಾಲೇಜಿಗೆ ನೇಮಕವಾದ ನಂತರ ಅಡಗಿ ಕುಳಿತಿದ್ದರು. ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರು ವಿಶ್ವವಿದ್ಯಾನಿಲಯಕ್ಕೂ ಬರಲಿಲ್ಲ.ಖಾನ್ ಅವರು ಜೈಪುರಕ್ಕೆ ಹೋಗಿದ್ದಾರೆ ಎಂದು ಇವತ್ತು ಆ ವಿಭಾಗದ ಮುಖ್ಯಸ್ಥರು ಹೇಳಿದರು. ಅವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಗಳೂ ಕೇಳಿ ಬರುತ್ತಿವೆ. ಆದರೆ ಅದು ಸತ್ಯಕ್ಕೆ ದೂರವಾದುದು. ತಾನು ಊರಿಗೆ ಹೋಗುತ್ತಿರುವುದಾಗಿ ಖಾನ್, ವಿಭಾಗದ ಮುಖ್ಯಸ್ಥರಿಗೆ ತಿಳಿಸಿ ಹೋಗಿದ್ದಾರೆ ಎಂದು ಎಸ್‌ವಿಡಿವಿ ಡೀನ್ ವಿಂಧೇಶ್ವರಿ ಮಿಶ್ರಾ ಹೇಳಿದ್ದಾರೆ.

ADVERTISEMENT

ಎರಡು ದಿನಗಳ ಹಿಂದೆ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಖಾನ್ , ವಿದ್ಯಾರ್ಥಿಗಳ ಮನಸ್ಸು ಬದಲಾಗಬಹುದು ಎಂಬ ಆಶಾವಾದ ವ್ಯಕ್ತಪಡಿಸಿದ್ದರು. ಜೀವನವಿಡೀ ಸಂಸ್ಕೃತ ಕಲಿದ್ದೆ. ನಾನು ಮುಸ್ಲಿಂ ಎಂದು ಯಾರೂ ಬೊಟ್ಟು ಮಾಡಿರಲಿಲ್ಲ. ನಾನು ಈಗ ಕಲಿಸಲು ಮುಂದಾದಾಗ ನಾನು ಮುಸ್ಲಿಂ ಎಂಬುದು ಮುಖ್ಯ ವಿಷಯವಾಯಿತು ಎಂದಿದ್ದರು ಖಾನ್.

ವಿದ್ಯಾರ್ಥಿಗಳ ಬೆಂಬಲ
ಇದೇ ಮೊದಲ ಬಾರಿಗೆ ಬಿಎಚ್‌ಯು ವಿದ್ಯಾರ್ಥಿಗಳು ಮುಂದೆ ಬಂದು ಫಿರೋಜ್ ಖಾನ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ನಾವು ಫಿರೋಜ್ ಖಾನ್ ಜತೆಗಿದ್ದೇವೆ ಎಂದು ಬರೆದ ಬ್ಯಾನರ್ ಹಿಡಿದು ವಿದ್ಯಾರ್ಥಿಗಳು ಲಂಕಾ ಗೇಟ್‌ನಿಂದ ರವಿದಾಸ್ ಗೇಟ್ ವರೆಗೆ ಮಾರ್ಚ್ ನಡೆಸಿದ್ದಾರೆ.ಎನ್‌ಎಸ್‌ಯುಐ, ಯೂತ್ ಫಾರ್ ಸ್ವರಾಜ್ ಮತ್ತು ಎಐಎಸ್‌ಎ ಮೊದಲಾದ ಸಂಘಟನೆಗಳ ಜಂಟಿ ಕಾರ್ಯ ಸಮಿತಿಯು ಈ ರೀತಿ ಶಾಂತಿಯುತವಾಗಿ ಮಾರ್ಚ್ ನಡೆಸಿತ್ತು. ಮಾರ್ಚ್ ನಡೆಸುವ ಬಗ್ಗೆ ಪೂರ್ವ ನಿರ್ಧಾರವಾಗಿರಲಿಲ್ಲ. ಈ ಸಮಸ್ಯೆ ಪರಿಹಾರವಾಗದಿದ್ದರೆ ನಾವು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿ ಸಂಘಟನೆಗಳು ಗುರುವಾರ ಹೇಳಿವೆ.

ಈ ಬಗ್ಗೆ ವಿಶ್ವವಿದ್ಯಾಲಯದ ನಿಲುವು ಏನೆಂಬುದನ್ನು ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಉಪಕುಲಪತಿ ರಾಕೇಶ್ ಭಟ್ನಾಗರ್‌ನ್ನು ಭೇಟಿ ಮಾಡಿದ್ದರು. ಫಿರೋಜ್ ಖಾನ್ ಅವರನ್ನು ನೇಮಕ ಮಾಡಿರುವ ನಿರ್ಧಾರ ಸರಿಯಾಗಿಯೇ ಇದೆ ಎಂದು ವಿಶ್ವವಿದ್ಯಾನಿಲಯದ ಆಡಳಿತ ವರ್ಗ ಹೇಳಿದೆ ಎಂದು ಮೂಲಗಳು ಹೇಳಿವೆ. ಅದೇ ವೇಳೆ ಬಿಎಚ್‌ಯುವಿನ ಕೆಲವು ಪ್ರೊಫೆಸರ್‌ಗಳು ಫೇಸ್‌ಬುಕ್‌ ಬರಹಗಳ ಮೂಲಕ ಡಾ. ಫಿರೋಜ್ ಖಾನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.