ADVERTISEMENT

ಧಾರ್ಮಿಕ ಸ್ವಾತಂತ್ರ್ಯವನ್ನು ಸುಗ್ರೀವಾಜ್ಞೆ ಅತಿಕ್ರಮಿಸದಿರಲಿ: ಮುಸ್ಲಿಂ ನಾಯಕರು

ಮತಾಂತರಕ್ಕೆ ಕಡಿವಾಣ: ಉತ್ತರ ಪ್ರದೇಶ ಸರ್ಕಾರದಿಂದ ಕರಡು ಸುಗ್ರೀವಾಜ್ಞೆ

ಪಿಟಿಐ
Published 25 ನವೆಂಬರ್ 2020, 12:09 IST
Last Updated 25 ನವೆಂಬರ್ 2020, 12:09 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌   

ಲಖನೌ: ಮತಾಂತರಕ್ಕೆ ಕಡಿವಾಣ ಹಾಕಲು ಉತ್ತರ ಪ್ರದೇಶ ಸರ್ಕಾರ ತರಲು ನಿರ್ಧರಿಸಿರುವ ಸುಗ್ರಿವಾಜ್ಞೆಯು, ಸಾಂವಿಧಾನಿಕ ಹಕ್ಕಾದ ಧಾರ್ಮಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸದಂತೆ ಎಚ್ಚರಿಕೆ ವಹಿಸಿಬೇಕು ಎಂದು ಮುಸ್ಲಿಂ ನಾಯಕರು ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

ಮದುವೆಯಾಗುವ ಏಕೈಕ ಉದ್ದೇಶದಿಂದ ಧಾರ್ಮಿಕ ಮತಾಂತರ ಮಾಡುವುದಕ್ಕೆ ಕಡಿವಾಣ ಹಾಕುವ ಕರಡು ಸುಗ್ರೀವಾಜ್ಞೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ. ಸುಗ್ರೀವಾಜ್ಞೆಯಲ್ಲಿ ಇರುವ ನಿಯಮಗಳನ್ನು ಉಲ್ಲಂಘಿಸುವವರಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸುವ ಅವಕಾಶವಿದೆ.

ಸುಗ್ರೀವಾಜ್ಞೆಯ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ)ಹಿರಿಯ ಸದಸ್ಯ ಖಲೀದ್‌ ರಶೀದ್‌ ಫರಂಗಿಮಹ್ಲಿ, ‘ಹೊಸ ಸುಗ್ರೀವಾಜ್ಞೆಯಲ್ಲಿ ‘ಲವ್‌ ಜಿಹಾದ್‌’ ಎಂಬ ಪದ ಬಳಕೆ ಮಾಡದೇ ಇರುವುದು ಒಳ್ಳೆಯ ವಿಷಯ. ಬಲವಂತದ ಮತಾಂತರವು ಅಕ್ರಮ, ಅಪರಾಧ ಹಾಗೂ ಶಿಕ್ಷಾರ್ಹ ಎಂದು ಮುಸ್ಲಿಂ ಕಾನೂನಿನಲ್ಲೇ ಹೇಳಿದೆ. ಕುರಾನ್‌ನಲ್ಲೂ ಈ ಕುರಿತು ಅಲ್ಲಾ ಉಲ್ಲೇಖಿಸಿದ್ದು, ಧರ್ಮದಲ್ಲಿ ಬಲವಂತ ಸಮರ್ಥನೀಯವಲ್ಲ. ಹೀಗಾಗಿ ಇಂಥ ಮತಾಂತರಕ್ಕೆ ಶಿಕ್ಷಿಸುವುದಕ್ಕೆ ನಮಗೆ ಯಾವ ವಿರೋಧವೂ ಇಲ್ಲ’ ಎಂದಿದ್ದಾರೆ.

ADVERTISEMENT

‘ಶಾಂತಿ ಹಾಗೂ ಕೋಮು ಸೌಹಾರ್ದತೆಗೆ, ಮುಸ್ಲಿಂ ಹಾಗೂ ಹಿಂದೂಗಳು ಅವರವರ ಧರ್ಮದಲ್ಲೇ ಮದುವೆಯಾಗಬೇಕು ಎನ್ನುವುದು ನಮ್ಮ ಅಭಿಪ್ರಾಯ. ಸುಗ್ರೀವಾಜ್ಞೆಗೆ ನಮ್ಮ ಯಾವುದೇ ವಿರೋಧವಿಲ್ಲ’ ಎಂದರು.

‘ಈ ಸುಗ್ರೀವಾಜ್ಞೆಯು ಎಲ್ಲ ಭಾರತೀಯರ ಸಾಂವಿಧಾನಿಕ ಹಕ್ಕಾದ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಯಾವ ಅತಿಕ್ರಮವೂ ಆಗುವುದಿಲ್ಲ ಎನ್ನುವುದನ್ನು ಕಾನೂನಿನ ತಜ್ಞರು ವಿಶ್ಲೇಷಿಸಬೇಕು. ಉಳಿದಂತೆ ಈ ಕಾನೂನಿಗೆ ಯಾವ ವಿರೋಧವೂ ಇಲ್ಲ’ ಎಂದು ಹೇಳಿದರು.

‘ಕಾನೂನಿನ ಅವಶ್ಯಕತೆ ಇರಲಿಲ್ಲ’: ಸುಗ್ರೀವಾಜ್ಞೆ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷೆ ಶಾಹಿಸ್ತಾ ಅಂಬೆರ್‌, ‘ಮೋಸ ಮಾಡಿ ಅಥವಾ ಬಲವಂತದಿಂದ ಮತಾಂತರ ಮಾಡಿ ಮದುವೆಯಾದರೆ, ಅದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಬೇಕು. ಇದಕ್ಕೆ ನಮ್ಮಲ್ಲಿ ಈಗಾಗಲೇ ಕಾನೂನು ಇದೆ. ಹೊಸ ಕಾನೂನನ್ನು ತರುವ ಅವಶ್ಯಕತೆ ಇರಲಿಲ್ಲ’ ಎಂದರು.

‘ಹೊಸ ಕಾನೂನನ್ನು ತರಲು ಸರ್ಕಾರ ನಿರ್ಧರಿಸಿದರೆ, ಆ ಕಾನೂನು ದುರುಪಯೋಗವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು’ ಎಂದರು.

‘ಇಬ್ಬರು ವಯಸ್ಕರು, ಯಾವುದೇ ಜಾತಿ, ಧರ್ಮ ಅಥವಾ ರಾಷ್ಟ್ರದವರಾಗಲಿ ಇಚ್ಛೆಯ ಅನುಸಾರ ಮದುವೆಯಾದರೆ, ಅದು ಅವರ ವೈಯಕ್ತಿಕ ಹಕ್ಕು. ಈ ಅಂಶವನ್ನು ಸುಪ್ರಿಂ ಕೋರ್ಟ್‌ ಕೂಡಾ ಒಪ್ಪಿಕೊಂಡಿದೆ’ ಎಂದು ಎಐಎಂಪಿಎಲ್‌ಬಿ ಸದಸ್ಯ ಜಫ್ರಯಾಬ್‌ ಜಿಲಾನಿ ಹೇಳಿದರು.

‘ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಲು ಈಗಾಗಲೇ ಕಾನೂನು ಇದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇರುವ ಕಾರಣದಿಂದ, ರಾಜಕೀಯ ವೇದಿಕೆ ಸೃಷ್ಟಿಸಲು ಹಾಗೂ ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟುಹಾಕಲು ಈ ಸುಗ್ರೀವಾಜ್ಞೆ ತರಲಾಗಿದೆ’ ಎಂದು ಮುಸ್ಲಿಂ ಧಾರ್ಮಿಕ ನಾಯಕ ಸಾಜಿದ್‌ ರಶೀದಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.