ಮುಂಬೈ: ‘ಕಾನೂನು ಉಲ್ಲಂಘಿಸಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿಚಾರವನ್ನು ಕಾನೂನು ಜಾರಿ ಮಾಡುವ ಸಂಸ್ಥೆಗಳ ಸಿಬ್ಬಂದಿಯ ತಲೆಯಲ್ಲಿ ತುಂಬುವುದು ಅತ್ಯಗತ್ಯ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಅಕ್ರಮವಾಗಿ ನಿರ್ಮಿಸಿದ್ದ ಮಸೀದಿಯನ್ನು ಕೆಡವಲು ವಿಫಲವಾದ ಠಾಣೆ ಮುನಿಸಿಪಲ್ ಪಾಲಿಕೆಗೆ ಕೋರ್ಟ್ ಚಾಟಿ ಬೀಸಿತು.
‘ತನ್ನ ಜಾಗದಲ್ಲಿ ಅಕ್ರಮವಾಗಿ ಮಸೀದಿಯನ್ನು ನಿರ್ಮಿಸಲಾಗಿದೆ’ ಎಂದು ದೂರಿ ‘ನ್ಯೂ ಶ್ರೀ ಸ್ವಾಮಿ ಸಮರ್ಥ ಬೋರಿವಡೆ’ ಎಂಬ ಖಾಸಗಿ ಹೌಸಿಂಗ್ ಕಂಪನಿಯೊಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಮಾ.10ರಂದು ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಮತ್ತು ಕಮಲ್ ಖಾಟಾ ಅವರು ನಡೆಸಿದ್ದರು.
‘ರಂಜಾನ್ ಮಾಸ ಮುಗಿದ ಎರಡು ವಾರಗಳ ಒಳಗೆ ಮಸೀದಿಯನ್ನು ಕೆಡವಬೇಕು. ಏಪ್ರಿಲ್ 14ರ ಒಳಗೆ ಎಲ್ಲ ಪ್ರಕ್ರಿಯೆಗಳು ಮುಕ್ತಾಯವಾಗಬೇಕು. ಇದು ಪ್ರಜಾಪ್ರಭುತ್ವ ದೇಶವಾಗಿದೆ. ವ್ಯಕ್ತಿ ಅಥವಾ ಸಂಸ್ಥೆ ಅಥವಾ ಜನರ ಸಮೂಹವು ತಾವು ಕಾನೂನು ಪಾಲಿಸುವುದಿಲ್ಲ ಎಂದು ಹೇಳುವುದಕ್ಕೆ ಅವಕಾಶವಿಲ್ಲ. ಜೊತೆಗೆ, ಕಾನೂನು ಪಾಲಿಸುವುದಕ್ಕೆ ವಿರೋಧವನ್ನೂ ವ್ಯಕ್ತಪಡಿಸುವಂತಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.