ADVERTISEMENT

‘ಆರೋಗ್ಯ ಕಾರಣ’ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಸುಷ್ಮಾ ಸ್ವರಾಜ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 10:21 IST
Last Updated 20 ನವೆಂಬರ್ 2018, 10:21 IST
   

ನವದೆಹಲಿ:2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಆಡಳಿತಾರೂಢ ಬಿಜೆಪಿ ಹಿರಿಯ ನಾಯಕಿ, ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಘೋಷಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಸುಷ್ಮಾ ಅವರು ತಮ್ಮ ಈ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.

ಈ ತಿಂಗಳ ನಂತರ ಚುನಾವಣೆ ನಡೆಯಲಿವೆ. ‘ಆರೋಗ್ಯಕಾರಣ’ಗಳನ್ನು ಅವರು ಉಲ್ಲೇಖಿಸಿದ್ದಾರೆ ಎಂದು ವರದಿಗಳು ಹೇಳಿದ್ದಾಗಿ ಎನ್‌ಡಿ ಟಿವಿ ಮತ್ತು ಎಎನ್‌ಐ ವರದಿ ಮಾಡಿವೆ.

ADVERTISEMENT

‘ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂಬುದು ನನ್ನ ಮನಸ್ಸಿನ ಭಾವನೆ’ ಎಂದು 66 ವಯಸ್ಸಿನ ಸುಷ್ಮಾ ಸ್ವರಾಜ್‌ ಅವರು ಹೇಳಿದ್ದಾರೆ.

ಸುಷ್ಮಾ ಸ್ವರಾಜ್‌ ಅವರು ಮಧ್ಯಪ್ರದೇಶದ ರಾಜಧಾನಿಯಿಂದ 56 ಕಿ.ಮೀ. ದೂರದಲ್ಲಿರುವ ವಿದಿಶಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಅವರು ಸಂಸತ್‌ಗೆ ದೀರ್ಘಾವಧಿಯ ಗೈರನ್ನು ಪ್ರಶ್ನಿಸಿ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು. ಈ ಪೋಸ್ಟರ್‌ಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರುವ ತಮ್ಮ ನಿರ್ಧಾರವನ್ನು ಹೇಳಿದ್ದಾರೆ ಎಂದು ವರದಿಯಾಗಿದೆ.

ಪಕ್ಷ ಸುಷ್ಮಾ ಸ್ವರಾಜ್‌ ಅವರನ್ನು ರಾಜ್ಯಸಭೆಯ ಮೂಲಕ ಸಂಸತ್‌ಗೆ ಮರಳಿ ಕರೆತರಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಸುಷ್ಮಾ ಅವರು ತಮ್ಮ ಮೊನಚು ಹಾಗೂ ಕೌಶಲ ಪೂರ್ಣ ಮಾತುಗಳಿಗೆ ಹೆಸರಾಗಿದ್ದಾರೆ.

ಅವರಕುಟುಂಬದ ಮೂಲಗಳ ಪ್ರಕಾರ, ಸ್ವರಾಜ್‌ ಅವರಿಗೆ ಆರೋಗ್ಯದಲ್ಲಿ ಉಂಟಾಗಿರುವ ಸೋಂಕಿನಿಂದ ಮುಕ್ತರಾಗಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅಗತ್ಯವಿದೆ ಎಂದು ದೃಢಪಡಿಸಿದ್ದಾರೆ. ‘ಅವರು 11 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಈ ನಿರ್ಧಾರದ ಹಿಂದೆ ರಾಜಕೀಯ ಕಾರಣವಿಲ್ಲ’ ಎಂದು ಮೂಲಗಳು ತಿಳಿಸಿವೆ.

ಸುಷ್ಮಾ ಅವರು 2016ರಲ್ಲಿ ಮೂತ್ರಪಿಂಡದ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.