ADVERTISEMENT

ನನ್ನ ಫೋನ್ ಹ್ಯಾಕ್ ಆಗಿದೆ, ಸನ್ನಿವೇಶವು ತುರ್ತು ಪರಿಸ್ಥಿತಿಗಿಂತಲೂ ಗಂಭೀರ: ಮಮತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2021, 10:47 IST
Last Updated 28 ಜುಲೈ 2021, 10:47 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ–ಸಾಂದರ್ಭಿಕ ಚಿತ್ರ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ–ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಗಾಸಸ್‌ ಗೂಢಚರ್ಯೆಗೆ ಸಂಬಂಧಿಸಿದಂತೆ ಮತ್ತೆ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈಗಿನ ಸನ್ನಿವೇಶವು ತುರ್ತು ಪರಿಸ್ಥಿತಿಯ ಸಂದರ್ಭಕ್ಕಿಂತಲೂ ಗಂಭೀರವಾಗಿದೆ ಎಂದು ಆರೋಪಿಸಿದ್ದಾರೆ.

ಬುಧವಾರ ದೆಹಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, 'ಬದುಕು, ಸಂಪತ್ತು ಹಾಗೂ ಸುರಕ್ಷತೆಯನ್ನು ಒಳಗೊಂಡಿರುವ ಈ ವಿಚಾರವು (ಪೆಗಾಸಸ್‌) ಗಂಭೀರವಾದುದಾಗಿದೆ' ಎಂದರು.

'ನನ್ನ ಫೋನ್‌ ಹ್ಯಾಕ್‌ ಆಗಿದೆ. ಅಭಿಷೇಕ್‌ನ ಫೋನ್‌ ಅನ್ನು ಸಹ ಆಗಲೇ ಹ್ಯಾಕ್‌ ಮಾಡಲಾಗಿದೆ. ಪ್ರಶಾಂತ್‌ ಕಿಶೋರ್‌ ಅವರ ಫೋನ್‌ ಕೂಡ ಹ್ಯಾಕ್‌ ಆಗಿದೆ. ಒಂದು ಫೋನ್‌ ಅನ್ನು ಹ್ಯಾಕ್‌ ಮಾಡಿದರೆ ಸಾಕು, ಆ ಮೂಲಕ ಹಲವು ಫೋನ್‌ಗಳನ್ನು ಹ್ಯಾಕ್‌ ಮಾಡಬಹುದಾಗಿದೆ' ಎಂದು ಮಮತಾ ಹೇಳಿದರು.

ADVERTISEMENT

'ಪೆಗಾಸಸ್‌ ಎಂದರೇನು? ವೈರಸ್‌ಗಳಿಂದ ಭರ್ತಿಯಾಗಿರುವ ತಂತ್ರಾಂಶ. ನಮ್ಮ ಸುರಕ್ಷತೆ ಮತ್ತು ಭದ್ರತೆಗೆ ಅಪಾಯ ಎದುರಾಗಿದೆ. ಯಾರೊಬ್ಬರಿಗೂ ಸ್ವತಂತ್ರ ಇಲ್ಲವಾಗಿದೆ' ಎಂದರು.

ಮಮತಾ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

'ಪೆಗಾಸಸ್ ಗೂಢಚರ್ಚೆ ತಂತ್ರಾಂಶ ಹಗರಣದ ಸಂಬಂಧ ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು. ನಮಗೆ ಸುಪ್ರೀಂ ಕೋರ್ಟ್‌ ಮೇಲೆ ನಂಬಿಕೆ ಇದೆ' ಎಂದು ಹೇಳಿದರು.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯ ಲೋಕ ಕಲ್ಯಾಣ್ ಮಾರ್ಗದ ನಿವಾಸ ‘7’ರಲ್ಲಿ ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ, 'ಪೆಗಾಸಸ್ ವಿವಾದದ ಕುರಿತು ಪ್ರಧಾನಿ ಸರ್ವಪಕ್ಷ ಸಭೆ ಕರೆಯಬೇಕು. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸಬೇಕು' ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.