ADVERTISEMENT

‘ಎಂ–ಯೋಗ’ ಆ್ಯಪ್‌ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಪಿಟಿಐ
Published 21 ಜೂನ್ 2021, 20:45 IST
Last Updated 21 ಜೂನ್ 2021, 20:45 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಕೋವಿಡ್ ಪಿಡುಗಿನ ವಿರುದ್ಧದ ಹೋರಾಟಕ್ಕೆ ಆತ್ಮಸ್ಥೈರ್ಯ ಹೆಚ್ಚಿಸಲು ಯೋಗ ಭರವಸೆಯ ಕಿರಣವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೋಮವಾರ ಏಳನೇ ‘ಅಂತರ ರಾಷ್ಟ್ರೀಯ ಯೋಗ ದಿನ’ದ ಸಂದರ್ಭದಲ್ಲಿ ಅವರು ಮಾತನಾಡಿ, ಕೋವಿಡ್‌ ಸೋಂಕಿನ ವಿರುದ್ಧ ಹೋರಾಡುವ ಕ್ರಮವಾಗಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಇದಕ್ಕೆ ಪೂರಕವಾಗಿ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಎಚ್‌ಒ) ಸಹಯೋಗದಲ್ಲಿ ರೂಪಿಸಿದ ‘ಎಂ–ಯೋಗ’ ಅಪ್ಲಿಕೇಷನ್‌ ಅನ್ನು ಬಿಡುಗಡೆಗೊಳಿಸಿದರು.

ಯೋಗಾಭ್ಯಾಸದ ಸಾಮಾನ್ಯ ಶಿಷ್ಟಾಚಾರಕ್ಕೆ ಅನುಗುಣವಾಗಿ ವಿವಿಧ ಭಾಷೆಗಳಲ್ಲಿ ಯೋಗದ ವಿವಿಧ ಆಸನಗಳ ಕುರಿತು ವಿವರಗಳನ್ನು ಒಳಗೊಂಡ ವಿಡಿಯೊಗಳನ್ನು ಈ ಅಪ್ಲಿಕೇಷನ್‌ ಒಳಗೊಂಡಿದೆ.

ADVERTISEMENT

ಇದು ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ವಿಜ್ಞಾನದ ಸಮ್ಮಿಲನ ಎಂದು ಹೇಳಿದ ಅವರು, ಎಂ–ಯೋಗ ಅಪ್ಲಿಕೇಷನ್‌ ಮೂಲಕ ವಿಶ್ವದಾದ್ಯಂತ ಯೋಗ ಪಸರಿಸಲು ಹಾಗೂ ‘ಒಂದು ವಿಶ್ವ, ಒಂದು ಆರೋಗ್ಯ’ ಕಲ್ಪನೆ ಸಾಕಾರಗೊಳ್ಳಲು ಸಹಕಾರಿಯಾಗಲಿದೆ ಎಂದು ಆಶಿಸಿದರು.

ಕಳೆದ ಒಂದೂವರೆ ವರ್ಷದಲ್ಲಿ ಅಸಂಖ್ಯ ಜನರು ಯೋಗದತ್ತ ಒಲವು ತೋರಿದ್ದಾರೆ. ಕೊರೊನಾ ಜಗತ್ತಿನ ಬಾಗಿಲು ತಟ್ಟಿದಾಗ ಯಾವುದೇ ದೇಶ ಎದುರಿಸಲು ಸಜ್ಜಾಗಿರಲಿಲ್ಲ. ನಾವೆಲ್ಲರೂ ಈಗ ಸಂಕಷ್ಟವನ್ನು ನೋಡಿದ್ದೇವೆ. ಈ ಹೊತ್ತಿನಲ್ಲಿ ಯೋಗ ನಮ್ಮ ಆತ್ಮಸ್ಥೈರ್ಯದ ಮೂಲವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.