ADVERTISEMENT

70 ವರ್ಷಗಳಿಂದ ನೀರು, ಆಹಾರ ಸೇವಿಸದೆ ಬದುಕಿದ್ದ ಯೋಗಿ ಪ್ರಹ್ಲಾದ್‌ ಜಾನಿ ನಿಧನ

ಪಿಟಿಐ
Published 26 ಮೇ 2020, 20:13 IST
Last Updated 26 ಮೇ 2020, 20:13 IST
ಚುನ್ರಿವಾಲಾ ಮಾತಾಜಿ
ಚುನ್ರಿವಾಲಾ ಮಾತಾಜಿ   

ಅಹಮದಾಬಾದ್: ಸುಮಾರು 70 ವರ್ಷಗಳಿಂದ ನೀರು, ಆಹಾರ ಸೇವಿಸದೆ ಬದುಕಿದ್ದರು ಎನ್ನಲಾಗಿದ್ದ ಯೋಗಿ ಪ್ರಹ್ಲಾದ್‌ ಜಾನಿ ಅಲಿಯಾಸ್‌ ಚುನ್ರಿವಾಲಾ ಮಾತಾಜಿ ಮಂಗಳವಾರ ಮುಂಜಾನೆ ಗುಜರಾತ್‌ನ ಗಾಂಧಿನಗರದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಶಿಷ್ಯರು ತಿಳಿಸಿದ್ದಾರೆ.

ಅವರಿಗೆ 90 ವರ್ಷವಾಗಿತ್ತು. ತಮ್ಮ ಹುಟ್ಟೂರು ಚರದದಲ್ಲಿ ಅವರು ನಿಧನರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗುಜರಾತ್‌ನಲ್ಲಿ ಯೋಗಿ ಜಾನಿ ಅವರು ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದರು. ನೀರು, ಆಹಾರವಿಲ್ಲದೇ ಜಾನಿ ಹೇಗೆ ಬದುಕುತ್ತಿದ್ದಾರೆ? ಅವರು ಹೇಳುತ್ತಿರುವುದು ಸತ್ಯವೇ ಎನ್ನುವುದನ್ನು 2003 ಹಾಗೂ 2010ರಲ್ಲಿ ವಿಜ್ಞಾನಿಗಳು ಪರೀಕ್ಷಿಸಿದ್ದರು. ದೈವ ಬಲ ಇರುವ ಕಾರಣದಿಂದಾಗಿ ನನಗೆ ನೀರು, ಆಹಾರ ಬೇಡ ಎಂದು ಅವರು ಪ್ರತಿಪಾದಿಸುತ್ತಿದ್ದರು.

15 ದಿನಗಳ ಕಾಲ ಇವರನ್ನು ವೈಜ್ಞಾನಿಕ ವೀಕ್ಷಣೆ ನಡೆಸಿದ ವಿಜ್ಞಾನಿಗಳು, ‘ನಿರಾಹಾರಕ್ಕೆ ಇವರ ದೇಹ ಒಗ್ಗಿಕೊಳ್ಳುವ ವಿಪರೀತವಾದ ಶಕ್ತಿ ಇದೆ’ ಎಂದು ಹೇಳಿದ್ದರು.

ADVERTISEMENT

ಜಾನಿ ಅವರ ಮೃತದೇಹವನ್ನು ಬನಾಸ್‌ಕಾಂಠ್‌ ಜಿಲ್ಲೆಯ ಅಂಬಾಜಿ ದೇವಸ್ಥಾನದ ಸಮೀಪ ಇರುವ ಆಶ್ರಮಕ್ಕೆ ತೆಗೆದುಕೊಂಡು ಹೋಗಲಾಗಿದೆ. ಎರಡು ದಿನಗಳ ಕಾಲ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುವುದು. ಗುರುವಾರ ಆಶ್ರಮದಲ್ಲಿ ಅವರನ್ನು ಸಮಾಧಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಅಂಬಾದೇವಿಯನ್ನು ಪೂಜಿಸುತ್ತಿದ್ದ ಕಾರಣ ಅವರು ಕೆಂಪು ಸೀರೆ (ಚುನ್ರಿ) ಉಡುತ್ತಿದ್ದರು ಹಾಗೂ ಮಹಿಳೆಯಂತೆ ವೇಷಭೂಷಣ ಧರಿಸುತ್ತಿದ್ದರು. ಹೀಗಾಗಿ ಅವರು ಚುನ್ರಿವಾಲ ಮಾತಾಜಿ ಎಂದು ಪ್ರಖ್ಯಾತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.