ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ (ಎಫ್‌ಎನ್‌ಟಿಎ) ರಚನೆಗೆ ತ್ರಿಪಕ್ಷೀಯ ಒಪ್ಪಂದವು ಐತಿಹಾಸಿಕವಾಗಿದ್ದು, ಈಶಾನ್ಯ ಭಾಗದಲ್ಲಿ ಶಾಂತಿ ಮತ್ತು ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಈ ಐತಿಹಾಸಿಕ ಒಪ್ಪಂದದಿಂದ ಪೂರ್ವ ನಾಗಾಲ್ಯಾಂಡ್‌ನಲ್ಲಿ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪೂರ್ವ ನಾಗಾಲ್ಯಾಂಡ್‌ನ ಬೇಡಿಕೆಗಳನ್ನು ಪರಿಹರಿಸುವ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ’ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ ರಚಿಸಲಾಗಿದೆ. ಈ ಒಪ್ಪಂದ ಕೇಂದ್ರ ಸರ್ಕಾರ, ನಾಗಾಲ್ಯಾಂಡ್ ಸರ್ಕಾರ ಮತ್ತು ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್‌ನೊಂದಿಗೆ ನಡೆದಿದೆ.
ಈ ಒಪ್ಪಂದ ಜನರಿಗೆ ಅವಕಾಶ ಮತ್ತು ಸಮೃದ್ಧಿಯ ಮಾರ್ಗ ಒದಗಿಸುತ್ತದೆ. ಈಶಾನ್ಯದಲ್ಲಿ ಶಾಂತಿ, ಪ್ರಗತಿ ಮತ್ತು ಸಮಗ್ರ ಬೆಳವಣಿಗೆಗೆ ನಮ್ಮ ಸರ್ಕಾರದ ಬದ್ಧತೆಯನ್ನು ಈ ಒಪ್ಪಂದ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದವು ನಾಗಾಲ್ಯಾಂಡ್‌ನ ಆರು ಜಿಲ್ಲೆಗಳಾದ ಟ್ಯೂನ್‌ಸಾಂಗ್, ಮಾನ್, ಕಿಫೈರ್, ಲಾಂಗ್ಲೆಂಗ್, ನೋಕ್ಲಾಕ್ ಮತ್ತು ಶಮಾಟರ್‌ಗಳಿಗೆ ಸಹಕಾರಿಯಾಗಲಿದೆ. ಎಫ್‌ಎನ್‌ಟಿಎಗೆ 46 ವಿಷಯಗಳು ಒಳಪಡಲಿದ್ದು ಅಧಿಕಾರ ವಿಕೇಂದ್ರೀಕರಣಕ್ಕೆ ದಾರಿ ಮಾಡಿಕೊಡಲಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.