ADVERTISEMENT

ನಮಾಜ್‌ ತಡೆಯಲು ಉದ್ಯಾನದಲ್ಲಿ ನೀರು ತುಂಬಿಸಿದ ಉತ್ತರಪ್ರದೇಶ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 19:37 IST
Last Updated 28 ಡಿಸೆಂಬರ್ 2018, 19:37 IST
   

ಲಖನೌ: ಉತ್ತರ ಪ್ರದೇಶದ ಸಾರ್ವಜನಿಕ ಉದ್ಯಾನಗಳಲ್ಲಿ ‘ನಮಾಜ್‌’ ನಿರ್ಬಂಧಿಸಿದ್ದ ಉತ್ತರ ಪ್ರದೇಶ ಪೊಲೀಸರು ಈಗ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ.

ಉದ್ಯಾನಗಳಲ್ಲಿ ಶುಕ್ರವಾರದ ‘ನಮಾಜ್‌’ ಸಲ್ಲಿಸದಂತೆ ತಡೆಯಲು ಉತ್ತರ ಪ್ರದೇಶ ಪೊಲೀಸರು ನೊಯಿಡಾದ ಸಾರ್ವಜನಿಕ ಉದ್ಯಾನಗಳಲ್ಲಿ ನೀರು ತುಂಬಿಸಿದ್ದರು.

ಎಂದಿನಂತೆ ಮಧ್ಯಾಹ್ನ ಪ್ರಾರ್ಥನೆ ಸಲ್ಲಿಸಲು ಸಾರ್ವಜನಿಕ ಉದ್ಯಾನಕ್ಕೆ ಬಂದ ನೊಯಿಡಾದ ತಂತ್ರಜ್ಞಾನ ಕಂಪನಿಗಳ ನೂರಾರು ಮುಸ್ಲಿಂ ಉದ್ಯೋಗಿಗಳು ಅಲ್ಲಿದ್ದ ನೀರು ಕಂಡು ಮರಳಿ ಹೋದರು.

ADVERTISEMENT

‘ಸಾರ್ವಜನಿಕ ಸ್ಥಳ ಮತ್ತು ಉದ್ಯಾನಗಳಲ್ಲಿ ನಡೆಯುವ ಆರ್‌ಎಸ್‌ಎಸ್‌ ಶಾಖಾಗಳ ಮೇಲೂ ಇದೇ ರೀತಿಯ ನಿರ್ಬಂಧ ಹೇರುವಂತೆ’ ಕಾಂಗ್ರೆಸ್‌ ಒತ್ತಾಯಿಸಿದೆ. ‘ಉದ್ಯಾನಗಳಲ್ಲಿ ನಮಾಜ್‌ ಮಾತ್ರವಲ್ಲ, ಎಲ್ಲ ರೀತಿಯ ಧಾರ್ಮಿಕ ಚಟುವಟಿಕೆ, ಸಾರ್ವಜನಿಕ ಸಭೆ, ಸಮಾರಂಭ ನಿಷೇಧಿಸುವಂತೆ’ ಪತ್ರ ಬರೆದಿದೆ.

‘ನಿರ್ಬಂಧ ಕೇವಲ ನಮಾಜ್‌ ಮಾತ್ರ ಸೀಮಿತವಾಗಿಲ್ಲ. ಎಲ್ಲ ಧರ್ಮದವರಿಗೂ ಇದು ಅನ್ವಯಿಸುತ್ತದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಹೌದು, ನಮಾಜ್‌ ತಡೆಯುವುದಕ್ಕಾಗಿಯೇ ಉದ್ಯಾನದಲ್ಲಿ ನೀರು ತುಂಬಿಸಲಾಗಿತ್ತು. ಗಲಾಟೆಯಾಗದಂತೆ ಹೆಚ್ಚುವರಿ ಪೊಲೀಸರನ್ನು ಉದ್ಯಾನದ ಸುತ್ತಮುತ್ತ ನಿಯೋಜಿಸಲಾಗಿತ್ತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ನೋಟಿಸ್‌

ಕಂಪನಿಯ ಮುಸ್ಲಿಂ ಉದ್ಯೋಗಿಗಳು ಪ್ರತಿ ಶುಕ್ರವಾರ ನೊಯಿಡಾ ಪ್ರಾಧಿಕಾರಕ್ಕೆ ಸೇರಿದ ಉದ್ಯಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಸೇರುತ್ತಿದ್ದರು.

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‌ ನಿರ್ಬಂಧಿಸಿ ನೊಯಿಡಾ ವಲಯದ ‘58’ನೇ ಪೊಲೀಸ್‌ ಠಾಣೆ ಸುತ್ತಮುತ್ತಲಿನ ಕಂಪನಿಗಳಿಗೆ ಇತ್ತೀಚೆಗೆ ನೋಟಿಸ್‌ ನೀಡಿತ್ತು.

ಸೂಚನೆ ಪಾಲಿಸದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ತಂತ್ರಜ್ಞಾನ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.