ADVERTISEMENT

ನಂದಿನಿ ಹೆಸರು ಬಳಕೆಗೆ ‘ಸುಪ್ರೀಂ’ ಅನುಮತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 19:49 IST
Last Updated 26 ಜುಲೈ 2018, 19:49 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ರೆಸ್ಟೋರೆಂಟ್‌ನಲ್ಲಿ ‘ನಂದಿನಿ’ ಹೆಸರಿನ ಉತ್ಪನ್ನಗಳ ಮಾರಾಟದ ನೋಂದಣಿಗೆ ಸಂಸ್ಥೆಯೊಂದಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಅಲ್ಲದೇ,ತನ್ನ ಹೈನು ಉತ್ಪನ್ನವಾದ ‘ನಂದಿನಿ’ ಬ್ರಾಂಡ್ ಹೆಸರನ್ನು ಬೇರೊಂದು ಸಂಸ್ಥೆ ಬಳಸಿಕೊಳ್ಳಲು ವಿರೋಧ ವ್ಯಕ್ತಪಡಿಸಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್‌) ಸಲ್ಲಿಸಿದ್ದ ಆಕ್ಷೇಪಣೆಯನ್ನು ಗುರುವಾರ ತಳ್ಳಿಹಾಕಿದೆ.

‘ನಿರ್ದಿಷ್ಟ ಹೆಸರಿನ ಸರಕನ್ನು ಮಾರಾಟ ಮಾಡಿ ಸ್ಪರ್ಧೆ ನೀಡದಿದ್ದಲ್ಲಿ ಯಾವುದೇ ಸಂಸ್ಥೆಯು ಟ್ರೇಡ್‌ ಮಾರ್ಕ್‌ ಮೇಲೆ ಏಕಸ್ವಾಮ್ಯ ಸ್ಥಾಪಿಸಲಾಗುವುದಿಲ್ಲ’ ಎಂದು ‘ನಂಧಿನಿ ಡಿಲಕ್ಸ್‌’ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ನಂದಿನಿ ಎಂಬುದು ದೇವತೆಯ ಹೆಸರಾಗಿದೆ. ಹಿಂದೂ ಪುರಾಣದ ಪ್ರಕಾರ ಈ ಹೆಸರು ಹಸುವನ್ನು ಪ್ರತಿನಿಧಿಸುತ್ತದೆ. ಇದು ಪ್ರತಿವಾದಿಯು ಆವಿಷ್ಕರಿಸಿದ ಅಥವಾ ಸೃಷ್ಟಿಸಿದ ಪದವಲ್ಲ. ಹಾಗಾಗಿ, ‘ನಂದಿನಿ’ ಉತ್ಪನ್ನಗಳಿಗೆ ಅದೇ ಹೆಸರು ಹೋಲುವ ‘ನಂಧಿನಿ’ ರೆಸ್ಟೋರಂಟ್‌ನಿಂದ ಯಾವುದೇ ರೀತಿಯ ಧಕ್ಕೆ ಎದುರಾಗದು ಎಂದು ತಿಳಿಸಿರುವ ಪೀಠ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಈ ಹೆಸರಿನ ಬಳಕೆಗೆ ಅರ್ಜಿದಾರರಿಗೆ ಅವಕಾಶ ನೀಡಲಾಗದು ಎಂದು ಹೇಳಿದೆ.

ADVERTISEMENT

‘ನಂದಿನಿ’ ಮತ್ತು ‘ನಂಧಿನಿ’ ಪದವು ಒಂದೇ ಶಬ್ಧವನ್ನು ಹೋಲುತ್ತದೆ. ಆದರೆ, ಉಭಯ ಸಂಸ್ಥೆಗಳು ಹೊಂದಿರುವ ಲಾಂಛನವು ಸಂಪೂರ್ಣ ವಿಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಒಂದೇ ರೀತಿಯ ಹೆಸರು ಗ್ರಾಹಕರಲ್ಲಿ ಯಾವುದೇ ರೀತಿಯ ಗೊಂದಲ ಉಂಟು ಮಾಡುವುದಿಲ್ಲ ಎಂದು ಹೇಳಿತು.

ಕೆಎಂಎಫ್‌ ಸಂಸ್ಥೆಯು ನಂದಿನಿ ಉತ್ಪನ್ನ ಬಿಡುಗಡೆ ಮಾಡಿದ ನಾಲ್ಕು ವರ್ಷಗಳ ನಂತರ ನಂಧಿನಿ ಡಿಲಕ್ಸ್‌ ಸಂಸ್ಥೆ ತನ್ನ ರೆಸ್ಟೋರಂಟ್‌ಗಳಲ್ಲಿ ಮಾರಾಟ ಮಾಡಲು ನಂಧಿನಿ ಹೆಸರಿನ ಉತ್ಪನ್ನ ಬಿಡುಗಡೆ ಮಾಡಿತ್ತು.

ವ್ಯಾಪಾರ ಚಿಹ್ನೆಯ ಉಪ ನೋಂದಣಾಧಿಕಾರಿ ಎದುರು ನೋಂದಣಿ ಮಾಡಿಕೊಳ್ಳದಂತೆ ಕೆಎಂಎಫ್‌ ಸಲ್ಲಿಸಿದ್ದ ಆಕ್ಷೇಪಣೆಯನ್ನು ಸ್ವೀಕರಿಸಿ ಬೌದ್ಧಿಕ ಆಸ್ತಿ ಹಕ್ಕು ಮೇಲ್ಮನವಿ ಪ್ರಾಧಿಕಾರ ನೀಡಿರುವ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.