ADVERTISEMENT

ರಾಣೆ ಬಂಧನ ನ್ಯಾಯಸಮ್ಮತ, ವಶಕ್ಕೆ ಪಡೆಯುವ ಅಗತ್ಯವಿಲ್ಲ: ನ್ಯಾಯಾಲಯ

ಪಿಟಿಐ
Published 25 ಆಗಸ್ಟ್ 2021, 8:18 IST
Last Updated 25 ಆಗಸ್ಟ್ 2021, 8:18 IST
ನ್ಯಾಯಾಲಯ–ಪ್ರಾತಿನಿಧಿಕ ಚಿತ್ರ
ನ್ಯಾಯಾಲಯ–ಪ್ರಾತಿನಿಧಿಕ ಚಿತ್ರ   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಬಂಧಿಸಿದ್ದು ನ್ಯಾಯಸಮ್ಮತವಾಗಿದೆ, ಆದರೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಮಹಾರಾಷ್ಟ್ರದ ಮಹಡ್‌ ನ್ಯಾಯಾಲಯ ತಿಳಿಸಿದೆ.

ರಾಣೆ ಅವರನ್ನು ಮಂಗಳವಾರ ತಡರಾತ್ರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅವರಿಗೆ ಜಾಮೀನು ಮಂಜೂರು ಮಾಡಿ ಮ್ಯಾಜಿಸ್ಟ್ರೇಟ್‌ ಎಸ್‌.ಎಸ್‌.ಪಾಟೀಲ್‌ ಆದೇಶ ಹೊರಡಿಸಿದ್ದರು. ಅದರ ಪ್ರತಿ ಬುಧವಾರ ಲಭ್ಯವಾಗಿದೆ.

‘ಬಂಧನಕ್ಕೆ ಕಾರಣ ಮತ್ತು ಇತರ ಕಾರಣಗಳನ್ನು ಪರಿಗಣಿಸಿ, ಬಂಧನವು ನ್ಯಾಯಸಮ್ಮತ ಎಂಬುದನ್ನು ನಾನು ಕಂಡುಕೊಂಡಿದ್ದೇನೆ’ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‌ರಾಣೆ ವಿರುದ್ಧದ ಕೆಲವು ಪ್ರಕರಣಗಳು ಜಾಮೀನು ರಹಿತವಾಗಿದ್ದರೂ, ಅವು ಜೀವಾವಧಿ ಅಥವಾ ಮರಣದಂಡನೆ ವಿಧಿಸುವಂತಹವಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಈ ಅಂಶಗಳನ್ನು ಪರಿಗಣಿಸಿ ಆರೋಪಿಯನ್ನು ಜಾಮೀನಿನ ಮೆಲೆ ಬಿಡುಗಡೆಗೆ ಸೂಚಿಸಲಾಗಿದೆ ಎಂದಿರುವ ಕೋರ್ಟ್‌, ಆರೋಪಿಯು ಇದೇ ರೀತಿಯ ಅಪರಾಧವನ್ನು ಮತ್ತೆ ಮಾಡಬಾರದು ಎಂದು ಎಚ್ಚರಿಸಿದೆ.

₹ 15 ಸಾವಿರದ ಬಾಂಡ್‌ ಆಧರಿಸಿ ರಾಣೆ ಅವರಿಗೆ ಜಾಮೀನು ನೀಡಿದ ನ್ಯಾಯಾಲಯವು, ಇದೇ 30 ಮತ್ತು ಸೆಪ್ಟೆಂಬರ್‌ 13ರಂದು ಅಲಿಬಾಗ್‌ನಲ್ಲಿರುವ (ರಾಯಗಡ) ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಹಾಜರಾಗುವಂತೆ ಅವರಿಗೆ ಸೂಚಿಸಿತು.

ವಿಚಾರಣೆ ಸಲುವಾಗಿ ಏಳು ದಿನಗಳವರೆಗೆ ರಾಣೆ ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.