ಮುಂಬೈ: ವಾರಕ್ಕೆ 70 ಗಂಟೆ ಕೆಲಸದ ಕುರಿತಾದ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ, ಯಾರೋಬ್ಬರೂ ಒತ್ತಾಯಪೂರ್ವಕವಾಗಿ ಅದನ್ನು ಹೇರುವಂತಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಕಳೆದ ವರ್ಷ ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಪರ–ವಿರೋಧ ಚರ್ಚೆಗಳು ನಡೆದಿದ್ದವು. ಈ ಬಗ್ಗೆ ಅವರು ಮುಂಬೈನ ಎಎಂಸಿಯ ಕಿಲಾಚಂದ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡುವಾಗ ಸ್ಪಷ್ಟೀಕರಣವನ್ನು ನೀಡಿದ್ದಾರೆ.
‘ನೀವು ಇದನ್ನು ಮಾಡಬೇಕು, ನೀವು ಇದನ್ನು ಮಾಡಬಾರದು ಎಂದು ಹೇಳುವವರು ಯಾರೂ ಇಲ್ಲ. ನೀವೇ ಅದನ್ನು ನಿರ್ಧರಿಸಬೇಕು’ ಎಂದು ಹೇಳಿದ್ದಾರೆ.
ಇನ್ಫೋಸಿಸ್ ಅನ್ನು ಸ್ಥಾಪಿಸಿದ ಆರಂಭಿಕ ವರ್ಷಗಳಲ್ಲಿ ತಮ್ಮ ಕಚೇರಿಯಲ್ಲಿ ಕಳೆದ ಸಮಯವನ್ನು ಹಂಚಿಕೊಂಡಿರುವ ಅವರು, ‘ನಾನು ಬೆಳಿಗ್ಗೆ 6:20ಕ್ಕೆ ಕಚೇರಿಗೆ ಹೋಗುತ್ತಿದ್ದೆ. ರಾತ್ರಿ 8:30ಕ್ಕೆ ಹೊರಡುತ್ತಿದ್ದೆ. 40 ವರ್ಷಗಳ ಕಾಲ ನಾನು ಇದನ್ನು ಮಾಡಿದ್ದೇನೆ. ಹಾಗಾಗಿ, ಯಾರೂ ಇದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಆಯ್ಕೆಗಳು ವೈಯಕ್ತಿಕವಾಗಿವೆ. ಸಾರ್ವಜನಿಕ ಚರ್ಚೆಗೆ ನಿಜವಾಗಿಯೂ ಸೂಕ್ತವಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
‘ಇವೆಲ್ಲ ಚರ್ಚೆ ನಡೆಸಬೇಕಾದ ವಿಷಯಗಳಲ್ಲ. ಅಗತ್ಯತತೆಯನ್ನು ಅರಿತು ಆತ್ಮಾವಲೋಕನ ಮಾಡಿಕೊಂಡು ಏನನ್ನು ಮಾಡಬೇಕೆಂಬುದರ ಬಗ್ಗೆ ವೈಯಕ್ತಿಕ ನಿರ್ಧಾರ ಕೈಗೊಳ್ಳಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಮತ್ತು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಟಿಯಿಂದ ಹೆಚ್ಚು ದುಡಿಮೆ, ಪ್ರಯತ್ನ ಅಗತ್ಯವಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹತ್ವಾಕಾಂಕ್ಷೆ, ಚಾಣಾಕ್ಷತನ, ಶಿಸ್ತು ಮತ್ತು ಉತ್ತಮ ಮೌಲ್ಯಗಳನ್ನು ಇಟ್ಟುಕೊಂಡು ಶ್ರಮಪಟ್ಟು ದುಡಿಯುವ ಜನರು ಎಲ್ಲ ತೊಡಕುಗಳನ್ನು ಮೀರಿ ಯಶಸ್ವಿ ದೇಶವನ್ನು ಕಟ್ಟುತ್ತಾರೆ ಎಂದು ಜರ್ಮನಿಯ ಸಮಾಜವಾದಿ ಮ್ಯಾಕ್ಸ್ ವೆಬ್ಬರ್ ಅವರ ಮಾತುಗಳನ್ನು ಮೂರ್ತಿ ಉಲ್ಲೇಖಿಸಿದ್ದಾರೆ.
ದೇಶದ ಶೇಕಡ 60ರಷ್ಟು ಜನರು ಈಗಲೂ ಉಚಿತ ಆಹಾರ ಧಾನ್ಯಗಳ ಮೇಲೆ ಅವಲಂಬಿತರಾಗಿದ್ದಾರೆ. ಅಂತಹ, ಬಡತನವು ಆರ್ಥಿಕವಾಗಿ ಬಲಿಷ್ಠ ದೇಶವನ್ನು ನಿರ್ಮಿಸುವುದಿಲ್ಲ ಎಂದಿದ್ದಾರೆ.
ಕಾರ್ಪೊರೇಟ್ ಸಂಸ್ಥೆಗಳ ದುರಾಸೆಯ ನಡವಳಿಕೆಯು ಜನರು ಬಂಡವಾಳಶಾಹಿಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಮೂರ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.