ADVERTISEMENT

ರಾಜ್ಯಕ್ಕೆ ಹೆಚ್ಚುವರಿಯಾಗಿ ₹ 1,200 ಕೋಟಿ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ:

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 21:29 IST
Last Updated 25 ನವೆಂಬರ್ 2020, 21:29 IST
   

ನವದೆಹಲಿ: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿ ರಾಜ್ಯದಲ್ಲಿ ಮತ್ತಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ₹ 1,200 ಕೋಟಿ ಹೆಚ್ಚುವರಿ ಅನುದಾನ ನೀಡಲು ಸಮ್ಮತಿ ಸೂಚಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ, ಕೇಂದ್ರವು ಪ್ರಸಕ್ತ ವರ್ಷ 2 ಕೋಟಿ ಹೆಚ್ಚುವರಿ ಮಾನವ ದಿನಗಳನ್ನು ಸೃಷ್ಟಿಸಲು ಅವಕಾಶ ನೀಡಿದ್ದರಿಂದ ಗ್ರಾಮೀಣ ಬಡ ಕುಟುಂಬಗಳಿಗೆ ಹೆಚ್ಚುವರಿ ಉದ್ಯೋಗ ದೊರೆಯಲಿದೆ ಎಂದರು.

2020–21ನೇ ಸಾಲಿಗೆ ಮನರೇಗಾ ಯೋಜನೆ ಅಡಿ 13 ಕೋಟಿ ಮಾನವ ದಿನಗಳ ಗುರಿಯನ್ನು ನಿಗದಿಪಡಿಸಿರುವ ಕೇಂದ್ರವು, ಪ್ರವಾಹ ಸ್ಥಿತಿ ಉಲ್ಬಣಿಸಿದ್ದರಿಂದ ಹೆಚ್ಚುವರಿ ಅನುದಾನ ಮಂಜೂರು ಮಾಡಲು ಸಮ್ಮತಿ ಸೂಚಿಸಿದೆ ಎಂದರು.

ADVERTISEMENT

ಕೊರೊನಾ ಲಾಕ್‌ಡೌನ್‌ ಹಾಗೂ ಪ್ರವಾಹದಿಂದಾಗಿ ಗ್ರಾಮೀಣ ಕೂಲಿಕಾರರು ಯೋಜನೆ ಅಡಿ ಹೆಚ್ಚು ಉದ್ಯೋಗ ಪಡೆಯುತ್ತಿದ್ದಾರೆ. ಈಗಾಗಲೇ 10.50 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿರುವುದು ಉತ್ತಮ ಸಾದನೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರವು ಮತ್ತೆ 2 ಕೋಟಿ ಹೆಚ್ಚುವರಿ ಮಾನವದಿನಗಳಿಗಾಗಿ ₹ 800 ಕೋಟಿ ಅನುದಾನದ ಭರವಸೆ ನೀಡಿದೆ ಎಂದು ಅವರು ವಿವರಿಸಿದರು.

ರಾಜ್ಯದ 173 ತಾಲ್ಲೂಕುಗಳಲ್ಲಿ ಪ್ರವಾಹ ತಲೆದೋರಿದದ್ದು, ಯೋಜನೆ ಅಡಿ ಪ್ರತಿ ಗ್ರಾಮೀಣ ಕುಟುಂಬಕ್ಕೆ 50 ಹೆಚ್ಚುವರಿ ಮಾನವ ದಿನಗಳ ಅವಕಾಶ ಕಲ್ಪಿಸಿ, ₹ 400 ಕೋಟಿ ಅನುದಾನ ಬಿಡುಗಡೆ ಮಾಡಲು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಒಪ್ಪಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಶ್ಯಾಮಪ್ರಸಾದ್ ಮುಖರ್ಜಿ -ಅರ್ಬನ್ ಮಿಷನ್ ಅಡಿ ಹೆಚ್ಚುವರಿಯಾಗಿ 90 ಕ್ಲಸ್ಟರ್‌ಗಳನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಕೇಂದ್ರದ ಸ್ಪಂದನೆಯೂ ದೊರೆತಿದ್ದು, ₹ 1,000 ಕೋಟಿ ಅನುದಾನ ದೊರೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಮನರೇಗಾ ಯೋಜನೆ ಅಡಿ ದೊರೆಯಬೇಕಿರುವ ಮೆಟೀರಿಯಲ್ ಖರೀದಿಯ ₹ 1,119 ಕೋಟಿ ಬಾಕಿ ಅನುದಾನವನ್ನು ಪಾವತಿಸುವಂತೆ ಕೋರಲಾಗಿದ್ದು, ಬಳಕೆ ಪ್ರಮಾಣಪತ್ರ ಸಲ್ಲಿಸಿದ ತಕ್ಷಣ ಅನುದಾನ ನೀಡುವ ಭರವಸೆಯನ್ನೂ ಸಚಿವ ತೋಮರ್‌ ನೀಡಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.