ADVERTISEMENT

ಬಿಜೆಪಿಯಿಂದ ಅರ್ಧಸತ್ಯ: ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ವಾಗ್ದಾಳಿ

ಆರ್‌ಜಿಎಫ್‌ ₹ 20 ಲಕ್ಷ ವಾಪಸ್‌ ಮಾಡಿದರೆ ಚೀನಾ ಸೇನೆ ಹಿಂದಿರುಗಿ ಹೋಗುವುದೇ?

ಏಜೆನ್ಸೀಸ್
Published 27 ಜೂನ್ 2020, 19:45 IST
Last Updated 27 ಜೂನ್ 2020, 19:45 IST
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ   

ನವದೆಹಲಿ (ಪಿಟಿಐ): ‘ರಾಜೀವ್‌ ಗಾಂಧಿ ಪ್ರತಿಷ್ಠಾನವು (ಆರ್‌ಜಿಎಫ್‌) ಪಡೆದ ₹ 20 ಲಕ್ಷ ದೇಣಿಗೆಯನ್ನು ಹಿಂದಿರುಗಿಸಿದರೆ, ಭಾರತದ ಭೂ ಪ್ರದೇಶದಿಂದ ಚೀನಾ ಸೇನೆಯು ತೊರೆದು ಹೋಗಲಿದೆಯೇ? ಈ ಕುರಿತು ಪ್ರಧಾನಿ ಸ್ಪಷ್ಟ ಭರವಸೆ ನೀಡಬೇಕು’

–ಆರ್‌ಜಿಎಫ್‌ ವಿರುದ್ಧದ ಆಪಾದನೆಗಳಿಗೆ ಹಿರಿಯ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರು ಪ್ರಧಾನಿ ಮೋದಿ ಅವರಿಗೆ ಹಾಕಿರುವ ಸವಾಲು ಇದು.

‘ಹದಿನೈದು ವರ್ಷಗಳ ಹಿಂದೆ ಆರ್‌ಜಿಎಫ್‌ ದೇಣಿಗೆ ಪಡೆದಿರುವುದಕ್ಕೂ ಮೋದಿ ಆಡಳಿತದಲ್ಲಿ ಈಗ ಚೀನಾ ಸೇನೆಯು ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದ್ದಕ್ಕೂ ಏನು ಸಂಬಂಧ’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ನಡ್ಡಾ ಅವರು ಅರ್ಧ ಸತ್ಯ ಮಾತ್ರ ಹೇಳುತ್ತಿದ್ದಾರೆ. ಸತ್ಯವನ್ನು ತಿರುಚಿ ಸುಳ್ಳುಗಳನ್ನು ಸೃಷ್ಟಿಸಲಾಗುತ್ತಿವೆ. ವಾಸ್ತವ ಸಂಗತಿಗಳನ್ನು ಮೊದಲು ಬಹಿರಂಗಪಡಿಸಿ. ಹಳೆಯ ದಿನಗಳಲ್ಲೇ ಕಾಲ ಕಳೆಯಬೇಡಿ’ ಎಂದೂ ಅವರು ಕುಟುಕಿದ್ದಾರೆ.

ಮೇ ಮತ್ತು ಜೂನ್‌ ತಿಂಗಳಲ್ಲಿನ ಗಾಲ್ವನ್‌ ಕಣಿವೆಯಲ್ಲಿ ಸೇನೆ ನಿಯೋಜನೆಯಾಗಿರುವ ಕುರಿತಾದ ಉಪಗ್ರಹ ಚಿತ್ರಗಳನ್ನು ಅವರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಭಾರತ ಮತ್ತು ಚೀನಾ ಗಡಿಯಲ್ಲಿ ಮೇ 22 ಮತ್ತು ಜೂನ್‌ 22ರ ಚಿತ್ರಗಳಲ್ಲಿನ ವ್ಯತ್ಯಾಸ ಗಳನ್ನು ಗಮನಿಸಿ’ ಎಂದು ಅವರು ಹೇಳಿದ್ದಾರೆ.

ಯುಪಿಎ ಆಡಳಿತಾವಧಿಯಲ್ಲಿ ಆರ್‌ಜಿಎಫ್‌ಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌
ಆರ್‌ಎಫ್‌) ಹಣ ನೀಡಲಾಗಿತ್ತು ಎಂದು ನಡ್ಡಾ ಆರೋಪಿಸಿದ್ದರು.

ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲ್‌, ‘2004ರ ಅಂತ್ಯದಲ್ಲಿ ಸುನಾಮಿ ಸಂಭವಿಸಿತ್ತು. ಆಗ ಪಿಎಂಎನ್‌ಆರ್‌ಎಫ್‌ ನಿಂದ ರಾಜೀವ್‌ ಗಾಂಧಿ ಪ್ರತಿಷ್ಠಾನ ₹20 ಲಕ್ಷ ಸ್ವೀಕರಿಸಿತ್ತು. ಈ ಹಣವನ್ನು ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಬಳಸಿಕೊಳ್ಳಲಾಗಿತ್ತು’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಚೀನಾ ರಾಯಭಾರ ಕಚೇರಿ ಯಿಂದ 2005ರಲ್ಲಿ ₹1.45 ಕೋಟಿ ಯನ್ನು ಪಡೆಯಲಾಗಿತ್ತು. ಈ ಹಣ ವನ್ನು ಅಂಗವಿಕಲರ ಕಲ್ಯಾಣಕ್ಕೆ ಹಾಗೂ ಭಾರತ ಮತ್ತು ಚೀನಾ ಸಂಬಂಧಗಳ ಕುರಿತಾದ ಸಂಶೋಧನೆಗೆ ಬಳಸಲಾಗಿತ್ತು’ ಎಂದು ಹೇಳಿದ್ದಾರೆ.

‘ನಿರ್ದಿಷ್ಟ ಉದ್ದೇಶಕ್ಕೆ ಈ ಹಣವನ್ನು ಬಳಸಲಾಗಿದೆ ಮತ್ತು ಲೆಕ್ಕಪತ್ರದ ಪರಿಶೀಲನೆಯನ್ನು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕಾನೂನುಬದ್ಧವಾಗಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

1962ರಿಂದ 45 ಸಾವಿರ ಚದರ ಕಿ.ಮೀ. ಭೂಮಿ ಅತಿಕ್ರಮಿಸಿರುವ ಚೀನಾ

ಸಾತಾರ (ಪಿಟಿಐ): ‘1962ರ ಭಾರತ– ಚೀನಾ ಯುದ್ಧದ ನಂತರ ನಮ್ಮ 45 ಸಾವಿರ ಚದರ ಕಿ.ಮೀ ಭೂಪ್ರದೇಶವನ್ನು ಚೀನಾ ಕಬಳಿಸಿದೆ ಎಂಬುದನ್ನು ಯಾರೂ ಮರೆಯಬಾರದು. ರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳಲ್ಲಿ ರಾಜಕೀಯ ಬೇಡ’ ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

‘ಗಡಿ ಸಂರಕ್ಷಣೆ ಮಾಡುತ್ತಿದ್ದ ಸೈನಿಕರು ಬಹಳ ಎಚ್ಚರದಿಂದ ಕೆಲಸ ಮಾಡಿದ್ದಾರೆ. ಆದ್ದರಿಂದ, ಗಾಲ್ವನ್‌ ಸಂಘರ್ಷದ ಘಟನೆಯನ್ನು ರಕ್ಷಣಾ ಸಚಿವರ ವೈಫಲ್ಯ ಎಂದು ಟೀಕಿಸುವುದು ಸರಿಯಲ್ಲ. ಚೀನಾದ ಪ್ರಚೋದನೆಯಿಂದಾಗಿ ಅಲ್ಲಿ ಸಂಘರ್ಷ ನಡೆದಿದೆ. ಇಡೀ ಪ್ರಕರಣ ಅತ್ಯಂತ ಸೂಕ್ಷ್ಮವಾದುದು ಎಂದು ಮಾಜಿ ರಕ್ಷಣಾ ಸಚಿವರೂ ಆಗಿರುವ ಪವಾರ್‌ ಹೇಳಿದ್ದಾರೆ.

ರಾಹುಲ್‌ ಅವರ ಟೀಕೆಗೆ ಪ್ರತಿಕ್ರಿಯೆ ನೀಡುತ್ತಾ, ‘1962ರ ಯುದ್ಧದ ನಂತರ ಕಬಳಿಸಿಕೊಂಡಿದ್ದ 45 ಸಾವಿರ ಚದರ ಕಿ.ಮೀ ಭೂಪ್ರದೇಶವು ಇನ್ನೂ ಚೀನೀಯರ ಸ್ವಾಧೀನದಲ್ಲೇ ಇದೆ. ಆ ನಂತರವೂ ಇನ್ನಷ್ಟು ಭೂಪ್ರದೇಶವನ್ನು ಕಬಳಿಸಿಕೊಂಡಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ನಮ್ಮ ಇಷ್ಟೊಂದು ದೊಡ್ಡ ಭೂಪ್ರದೇಶವನ್ನು ಕಬಳಿಸಿಕೊಂಡಿದ್ದನ್ನು ಕಡೆಗಣಿಸಲು ಸಾಧ್ಯವಿಲ್ಲ. ಇದು ರಾಷ್ಟ್ರೀಯ ಭದ್ರತೆಯ ವಿಚಾರ’ ಅವರು ತಿಳಿಸಿದ್ದಾರೆ.

ಚೀನಾ, ಚೋಕ್ಸಿಯಿಂದ ದೇಣಿಗೆ: ನಡ್ಡಾ ಆಪಾದನೆ

ಚೀನಾದ ಅತಿಕ್ರಮಣ ಹಾಗೂ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ 10 ಪ್ರಶ್ನೆಗಳ ದಾಳ ಎಸೆದಿದೆ. ರಾಜೀವ್‌ಗಾಂಧಿ ಪ್ರತಿಷ್ಠಾನಕ್ಕೂ, ಚೀನಾ ದೇಶ, ಉದ್ಯಮಿ ಮೆಹುಲ್ ಚೋಕ್ಸಿಗೂ ಇರುವ ನಂಟನ್ನು ಅದು ಪ್ರಶ್ನಿಸಿದೆ.

‘ಕೆಲ ತಿಂಗಳ ಹಿಂದೆ ಚೋಕ್ಸಿ ವಿರುದ್ಧ ದೊಡ್ಡ ಕೂಗು ಎದ್ದಿತ್ತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಪ್ರಧಾನಿ ವಿರುದ್ಧ ಹಾರಿಹಾಯುತ್ತಲೇ ಇದ್ದರು. ಆದರೆ ಚೋಕ್ಸಿ ಕೂಡ ರಾಜೀವ್‌ಗಾಂಧಿ ಪ್ರತಿಷ್ಠಾನದ ದಾನಿಗಳಲ್ಲಿ ಒಬ್ಬ ಎಂಬ ಅಂಶ ಇದೀಗ ಬಯಲಾಗಿದೆ. ಸೋನಿಯಾ ಗಾಂಧಿ ಅವರು ಚೋಕ್ಸಿಯಿಂದ ಮೊದಲು ಹಣ ಪಡೆದು, ನಂತರ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ನೆರವು ನೀಡಿ, ಇದೀಗ ಕ್ರಮ ತೆಗೆದುಕೊಳ್ಳವುಂತೆ ಈಗಿನ ಪ್ರಧಾನಿಯನ್ನು ಒತ್ತಾಯಿಸುತ್ತಿದ್ದಾರೆ. ಈಗ ಅವರು ಏನು ಹೇಳುತ್ತಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕುಟುಂಬದ ಪಾಪಗಳ ಬಗ್ಗೆ ಉತ್ತರಿಸಲೇಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.