ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದಾಖಲೆಯ 98 ನಿಮಿಷಗಳ ಕಾಲ ಭಾಷಣ ಮಾಡಿದರು.
ಆ ಮೂಲಕ ಸ್ವಾತಂತ್ರ್ಯ ದಿನಾಚರಣೆಯಂದು ಅತಿ ದೀರ್ಘಾವಧಿಯ ಭಾಷಣ ಮಾಡಿದ ಭಾರತದ ಪ್ರಧಾನಿ ಎನಿಸಿದ್ದಾರೆ.
ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯೋತ್ಸವದ ಭಾಷಣದ ಸರಾಸರಿ ಅವಧಿ 82 ನಿಮಿಷ ಆಗಿದೆ. ಇದು ಇತಿಹಾಸದಲ್ಲೇ ಯಾವುದೇ ಪ್ರಧಾನಿಗಿಂತ ಹೆಚ್ಚಾಗಿದೆ.
ಮೋದಿ ಅವರು 2016ರ ಸ್ವಾತಂತ್ರ್ಯೋವದ ಭಾಷಣದಲ್ಲಿ 96 ನಿಮಿಷಗಳ ಕಾಲ ಮಾತನಾಡಿರುವುದು ಈವರೆಗೆ ದಾಖಲೆಯಾಗಿತ್ತು. ಮೋದಿ ಅವರು 2017ರಲ್ಲಿ ಅತಿ ಕಡಿಮೆ 56 ನಿಮಿಷಗಳ ಭಾಷಣ ಮಾಡಿದ್ದರು.
2014ರಲ್ಲಿ 65 ನಿಮಿಷ, 2015ರಲ್ಲಿ 88 ನಿಮಿಷ, 2019ರಲ್ಲಿ 92 ನಿಮಿಷ, 2020ರಲ್ಲಿ 90 ನಿಮಿಷ, 2021ರಲ್ಲಿ 88 ನಿಮಿಷ, 2022ರಲ್ಲಿ 74 ನಿಮಿಷ ಮತ್ತು 2023ರಲ್ಲಿ 90 ನಿಮಿಷಗಳ ಕಾಲ ಭಾಷಣ ಮಾಡಿದ್ದರು.
1947ರಲ್ಲಿ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ 72 ನಿಮಿಷ ಮತ್ತು 1997ರಲ್ಲಿ ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ 71 ನಿಮಿಷಗಳ ಕಾಲ ಭಾಷಣ ಮಾಡಿದ್ದರು.
1954ರಲ್ಲಿ ನೆಹರೂ ಮತ್ತು 1966ರಲ್ಲಿ ಇಂದಿರಾ ಗಾಂಧಿ ಅತಿ ಕಡಿಮೆ 14 ನಿಮಿಷಗಳ ಕಾಲ ಭಾಷಣ ಮಾಡಿದ್ದರು.
ಸತತ 11ನೇ ಸಲ ಧ್ವಜಾರೋಹಣ...
ಪ್ರಧಾನಿ ನರೇಂದ್ರ ಮೋದಿ ಅವರು ಸತತ 11ನೇ ಬಾರಿಗೆ ಧ್ವಜಾರೋಹಣ ಮಾಡಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಮನಮೋಹನ್ ಸಿಂಗ್ ಅವರು ಸತತ 10 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದ್ದರು. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು 17 ಬಾರಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 16 ಬಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.