ನರೇಂದ್ರ ಮೋದಿ
ಪಿಟಿಐ ಚಿತ್ರ
ಭಾವನಗರ (ಗುಜರಾತ್): ಇತರ ದೇಶಗಳ ಮೇಲಿನ ಪರಾವಲಂಬನೆಯೇ ಭಾರತದ ಅತಿದೊಡ್ಡ ಶತ್ರುವಾಗಿದೆ. ಭಾರತವು ಚಿಪ್ಸ್‌ನಿಂದ (ಸೆಮಿಕಂಡಕ್ಟರ್) ಹಿಡಿದು ಶಿಪ್‌ವರೆಗೆ ಎಲ್ಲವನ್ನೂ ತಾನೇ ತಯಾರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಈ ಮೂಲಕ ಆತ್ಮನಿರ್ಭರ ಭಾರತದ ಕನಸನ್ನು ಸಾಕಾರಗೊಳಿಸಲು ಮತ್ತೊಮ್ಮೆ ಕರೆ ನೀಡಿದ್ದಾರೆ.
ಗುಜರಾತ್‌ನ ಭಾವನಗರದ ಗಾಂಧಿ ಮೈದಾನದಲ್ಲಿ ನಡೆದ ‘ಸಮುದ್ರ ಸೆ ಸಮೃದ್ಧಿ’ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಂಡು, ₹34,200 ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ‘ವಾಸ್ತವದಲ್ಲಿ ಭಾರತಕ್ಕೆ ವಿಶ್ವದಲ್ಲೇ ಯಾರೂ ಶತ್ರುಗಳಿಲ್ಲ. ನಮ್ಮ ಒಂದೇ ಶತ್ರುವೆಂದರೆ ಅದು ಇತರ ದೇಶಗಳ ಮೇಲಿನ ಅವಲಂಬನೆಯಾಗಿದೆ. ನಾವು ಈ ಪರವಾಲಂಬನೆಯನ್ನು ಸೋಲಿಸಬೇಕಿದೆ. ಮತ್ತೊಬ್ಬರ ಮೇಲೆ ಅವಲಂಬಿತರಾದಷ್ಟೂ ಸೋಲಿನ ಪ್ರಮಾಣ ಹೆಚ್ಚಾಗುತ್ತಲೇ ಇರುತ್ತದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು’ ಎಂದಿದ್ದಾರೆ.
ಅಲ್ಲದೇ, ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಭಾರತವು ಶಾಂತಿ, ಸ್ಥಿರತೆ, ಸಮೃದ್ಧಿಗಾಗಿ ಸ್ವಾಲಂಬನೆ ಸಾಧಿಸುವ ಅಗತ್ಯವಿದೆ. ದೇಶದ ಎಲ್ಲ ಸಮಸ್ಯೆಗಳಿಗೂ ಇರುವ ಏಕೈಕ ಔಷಧ ಎಂದರೆ ಅದು ಆತ್ಮನಿರ್ಭರ ಭಾರತ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.
ಪರಾವಲಂಬನೆಯಿಂದಾಗಿ ದೇಶ ಎದುರಿಸುತ್ತಿರುವ ಸಂಕಷ್ಟವನ್ನು ಪಟ್ಟಿ ಮಾಡಿದ ಮೋದಿ, ‘ವಿಶ್ವದ ಬೇರೆ–ಬೇರೆ ಭಾಗಕ್ಕೆ ನಮ್ಮ ಸರಕು ಸಾಗಿಸಲು ವಿದೇಶಿ ಕಂಪನಿಗಳಿಗೆ ವರ್ಷಂಪ್ರತಿ ₹6 ಲಕ್ಷ ಕೋಟಿ ಪಾವತಿಸುತ್ತಿದ್ದೇವೆ. ಇದು ನಮ್ಮ ರಕ್ಷಣಾ ಬಜೆಟ್‌ಗೆ ಸಮನಾಗಿದೆ. 50 ವರ್ಷಗಳ ಹಿಂದೆ ದೇಶದ ಶೇkw 40ರಷ್ಟು ವ್ಯಾಪಾರ –ವಹಿವಾಟು ಭಾರತ ನಿರ್ಮಿತ ಹಡಗುಗಳ ಮೂಲಕ ನಡೆಯುತ್ತಿತ್ತು. ಆದರೆ, ಈಗ ಇದು ಶೇ 5ಕ್ಕೆ ಇಳಿದಿದೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.