ADVERTISEMENT

ಮೋದಿ ಸರ್ಕಾರ ನಿದ್ರಿಸುತ್ತಿದೆ: ಲಾರಿಯೊಂದರ ತಿರುಚಿದ ಚಿತ್ರ ಹಂಚಿಕೊಂಡ ತರೂರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2021, 10:39 IST
Last Updated 6 ನವೆಂಬರ್ 2021, 10:39 IST
ಶಶಿ ತರೂರ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಲಾರಿಯ ಚಿತ್ರ
ಶಶಿ ತರೂರ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಲಾರಿಯ ಚಿತ್ರ   

ಬೆಂಗಳೂರು: ತಿರುವನಂತಪುರಂನ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಲಾರಿಯೊಂದರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದು, ಕೇಂದ್ರ ಸರ್ಕಾರ ನಿದ್ರಿಸುತ್ತಿದೆ ಎಂದು ಛೇಡಿಸಿದ್ದಾರೆ.

ಲಾರಿಯೊಂದರ ಹಿಂಬರಹದಲ್ಲಿ 'ದಯವಿಟ್ಟು ಹಾರ್ನ್‌ ಮಾಡಬೇಡಿ, ಮೋದಿ ಸರ್ಕಾರ ನಿದ್ರಿಸುತ್ತಿದೆ' ಎಂದು ಬರೆದಿದ್ದು, ಕೇಂದ್ರ ಸರ್ಕಾರಕ್ಕೆ ತಿವಿದಿದ್ದಾರೆ. ಆದರೆ ಇದು ನಿಜವಾದ ಚಿತ್ರವಲ್ಲ, ಫೋಟೊಶಾಪ್‌ ಮಾಡಿರುವ ಚಿತ್ರವೆಂದು ಅನೇಕರು ಕಮೆಂಟ್‌ ಮಾಡಿದ್ದಾರೆ. ಫ್ಯಾಕ್ಟ್‌ ಚೆಕ್‌ ವರದಿಗಳು ಇದನ್ನೇ ಹೇಳಿವೆ.

BIANOTI ಚಿತ್ರ

ಈ ಹಿಂದೆ ಇದೇ ಚಿತ್ರದ ಮೂಲಕ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಛೇಡಿಸಲಾಗಿತ್ತು. 'ಡೀಸೆಲ್‌ನಿಂದ ಚಲಿಸುತ್ತೇನೆ, ಸರಿಯಾಗಿ ಶುಲ್ಕವನ್ನು ಪಾವತಿಸುತ್ತೇನೆ. ಸೋನಿಯಾ ಮತ್ತು ರಾಹುಲ್‌ ಗಾಂಧಿ ಅವರಂತೆ ದಳ್ಳಾಳಿತನದಿಂದ ಜನರ ದುಡ್ಡಿನಲ್ಲಿ ಮಜಾ ಮಾಡುವುದಿಲ್ಲ' ಎಂದು ಹಿಂಬರಹದಲ್ಲಿ ಹೇಳಲಾಗಿತ್ತು. ಬೆನ್ನಲ್ಲೇ ಇದು ತಿರುಚಿದ ಚಿತ್ರ ಎಂದು 'ಫ್ಯಾಕ್ಟ್‌ಲಿ.ಇನ್‌' ವರದಿ ಮಾಡಿತ್ತು.

ADVERTISEMENT

ಈ ಫೋಟೊವನ್ನು ಹೋಲುವ ರೀತಿ ಚಿತ್ರ ಬಿಯಾನೊಟಿ(BIANOTI) ಎಂಬ ಬ್ಲಾಗ್‌ನಲ್ಲಿ ಲೇಖನವೊಂದರಲ್ಲಿ ಪ್ರಕಟವಾಗಿದೆ. ಮೂಲ ಚಿತ್ರದಲ್ಲಿ ಯಾವುದೇ ಹಿಂಬರ ಇಲ್ಲ. ಹಾಗಾಗಿ ಇದು ತಿರುಚಿದ ಚಿತ್ರ ಎಂದು ಫ್ಯಾಕ್ಟ್‌ಲಿ.ಇನ್‌ ಸ್ಪಷ್ಟಪಡಿಸಿತ್ತು.

ಇದಕ್ಕೂ ಮೊದಲು ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ 'ಮೋದಿ ಸರ್ಕಾರ ನಿದ್ರಿಸುತ್ತಿದೆ' ಎಂಬ ಹಿಂಬರಹವಿರುವ ಈ ಲಾರಿಯ ಚಿತ್ರವನ್ನು ಪೋಸ್ಟ್‌ ಮಾಡಲಾಗಿತ್ತು. ಬೆನ್ನಲ್ಲೇ 'ದಿ ಟೈಮ್ಸ್‌ ಆಫ್‌ ಇಂಡಿಯಾ'ದ ಫ್ಯಾಕ್ಟ್‌ ಚೆಕ್‌ ವಿಭಾಗದಲ್ಲಿ ಈ ಕುರಿತು ವರದಿ ಪ್ರಕಟಗೊಂಡಿತ್ತು. ಇದು ತಿರುಚಿದ ಚಿತ್ರ ಎಂದು ಟೈಮ್ಸ್‌ ಫ್ಯಾಕ್ಟ್‌ ಚೆಕ್‌ ಸ್ಪಷ್ಟಪಡಿಸಿತ್ತು.

ಶಶಿ ತರೂರ್‌ ಅವರ ಟ್ವೀಟ್‌ ಈಗಾಗಲೇ ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್‌ ಆಗಿದೆ.

'ದಿ ಟೈಮ್ಸ್‌ ಆಫ್‌ ಇಂಡಿಯಾ'ದ ಫ್ಯಾಕ್ಟ್‌ ಚೆಕ್‌ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.