ADVERTISEMENT

ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ; ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಏಜೆನ್ಸೀಸ್
Published 31 ಅಕ್ಟೋಬರ್ 2020, 8:44 IST
Last Updated 31 ಅಕ್ಟೋಬರ್ 2020, 8:44 IST
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. -ಪಿಟಿಐ ಚಿತ್ರ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. -ಪಿಟಿಐ ಚಿತ್ರ   

ಅಹಮದಾಬಾದ್‌: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 144ನೇ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಏಕತಾ ಪ್ರತಿಮೆ’ಗೆ ಗೌರವ ಸಲ್ಲಿಸಿದರು.

ಎರಡು ದಿನಗಳ ಗುಜರಾತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಶನಿವಾರ ಬೆಳಿಗ್ಗೆ ಪಟೇಲ್‌ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ‘ರಾಷ್ಟ್ರೀಯ ಏಕತಾ ದಿವಸ’ ಅಂಗವಾಗಿ ನಡೆದ ಸೇನಾಪಡೆಗಳ ಪಥಸಂಚಲನವನ್ನು ವೀಕ್ಷಿಸಿದರು.

ಇದೇ ವೇಳೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ‘ಕೆವಡಿಯಾ ಮತ್ತು ಅಹಮದಾಬಾದ್‌ ನಡುವೆ ‘ಸೀಪ್ಲೇನ್‌‘ ಸೇವೆ ಪ್ರಾರಂಭವಾಗಲಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲವಾಗಲಿದೆ’ ಎಂದು ಹೇಳಿದರು.

ADVERTISEMENT

‘ಇಂದು ಕಾಶ್ಮೀರ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗುತ್ತಿದೆ. ಅಲ್ಲಿ ಶಾಂತಿಯ ಪುನಃಸ್ಥಾಪನೆಯಾಗಲಿ ಅಥವಾ ಅಭಿವೃದ್ಧಿಗೆ ತೆಗೆದುಕೊಳ್ಳುತ್ತಿರುವ ಕ್ರಮಗಳಾಗಲಿ ಇಂದು ದೇಶವು ಏಕತೆಯ ಹೊಸ ಆಯಾಮಗಳನ್ನು ರೂಪಿಸುತ್ತಿದೆ’ ಎಂದು ಹೇಳಿದರು.

‘ಪುಲ್ವಾಮಾ ದಾಳಿ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ತ್ಯಾಗದ ಬಗ್ಗೆ ಕೆಲವರು ದುಃಖಿತರಾಗಿರಲಿಲ್ಲ ಎಂಬುದನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ, ವಿರೋಧ ಪಕ್ಷದವರು ರಾಜಕೀಯ ಮಾತ್ರ ಮಾಡುತ್ತಿದ್ದರು. ರಾಷ್ಟ್ರದ ಹಿತದೃಷ್ಟಿಯಿಂದ ಅಂತಹ ರಾಜಕಾರಣ ಮಾಡದಂತೆ ನಾನು ಅವರಿಗೆ ವಿನಂತಿಸುತ್ತೇನೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

‘ಇಂದು ವಿಶ್ವದ ಎಲ್ಲಾ ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಿಲ್ಲ. ಭಾರತ ನಿರಂತರವಾಗಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ’ ಎಂದರು.

‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ 130 ಕೋಟಿ ಭಾರತೀಯರು ಒಟ್ಟಾಗಿ ಯೋಧರನ್ನು ಗೌರವಿಸಿದ್ದಾರೆ. ಈ ಸಮಯದಲ್ಲಿ ದೇಶವು ತನ್ನ ಸಾಮೂಹಿಕ ಸಾಮರ್ಥ್ಯವನ್ನು ಸಾಬೀತುಪಡಿಸಿದ ರೀತಿ ಅಭೂತಪೂರ್ವವಾಗಿದೆ’ ಎಂದರು.

ನರ್ಮದಾ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಪಟೀಲ್‌ರ ಪ್ರತಿಮೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಯನ್ನು ದೇಶಕ್ಕೆ ಸಮರ್ಪಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.