ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ (ಸಂಗ್ರಹ ಚಿತ್ರ)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಹೃದಯವನ್ನು ಕದ್ದಿದ್ದಾರೆ ಹೊರತು ಮತಗಳನ್ನಲ್ಲ ಎಂದು ವಿರೋಧ ಪಕ್ಷಗಳ ಮತ ಕಳ್ಳತನ ಆರೋಪಕ್ಕೆ ದೆಹಲಿ ಸಿಎಂ ರೇಖಾ ಗುಪ್ತಾ ತಿರುಗೇಟು ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಅಭಿವೃದ್ಧಿಯ ಹೊಸ ಅಲೆ ಇದೆ. ಅನೇಕ ರಾಷ್ಟ್ರಗಳು ಭಾರತವನ್ನು ಮೆಚ್ಚಿಕೊಂಡಿವೆ ಹಾಗೂ ಗೌರವ ನೀಡುತ್ತಿವೆ ಎಂದು ತಿಳಿಸಿದ್ದಾರೆ.
ದೇಶ ಏಕೆ ಪ್ರಗತಿಪಥದತ್ತ ಸಾಗುತ್ತಿದೆ. ಬಡವರಿಗೆ ಏಕೆ ಅನುಕೂಲವಾಗುತ್ತಿದೆ ಹಾಗೂ ಅನೇಕ ದೇಶಗಳು ಭಾರತವನ್ನು ಗೌರವಿಸುತ್ತದೆ ಎಂದು ಚಿಂತೆಗೀಡಾಗಿರುವ ವಿರೋಧ ಪಕ್ಷಗಳು ಮೋದಿಯನ್ನು ನಿಂದಿಸುವಲ್ಲಿ ನಿರತವಾಗಿದೆ ಎಂದು ಗುಪ್ತಾ ಕಿಡಿಕಾರಿದ್ದಾರೆ.
'ಮಖಂಚೋರ್' (ಬಾಲ್ಯದಲ್ಲಿ ಬೆಣ್ಣೆಯನ್ನು ಕದಿಯುತ್ತಿದ್ದ ಶ್ರೀಕೃಷ್ಣನನ್ನು ಪ್ರೀತಿಯಿಂದ ಕರೆಯಲಾಗುತ್ತಿತ್ತು) ಹಾಗೆಯೇ ಮೋದಿ ಕೂಡ ’ಮನ್ ಕಾ ಚೋರ್’ ಏಕೆಂದರೆ, ದೇಶದ ಜನರ ಮನಸ್ಸನ್ನುಕದ್ದಿದ್ದಾರೆ ಎಂದು ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿ ಅವರಿಗೆ ಮತ ಕದಿಯುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ ರೇಖಾ, ಅಧಿಕಾರ ಕಳೆದುಕೊಂಡು ಈಗ ಚುನಾವಣೆಗಳನ್ನು ಎದುರಿಸಲು ಹೆದರುತ್ತಿರುವ ಪಕ್ಷಗಳು ಮೋದಿ ವಿರುದ್ಧ ಆರೋಪವನ್ನು ಮಾಡುತ್ತಿವೆ ಎಂದು ರಾಹುಲ್ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ ಕಳ್ಳತನದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಚುನಾವಣಾ ಆಯೋಗ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ನಡುವೆ ಒಪ್ಪಂದ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.