ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ 'ವಿಕ್ರಮ್' ಲ್ಯಾಂಡರ್ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ.
ಚಂದ್ರಯಾನ-3 ಯೋಜನೆ ಯಶಸ್ಸಿನ ಕುರಿತು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಐತಿಹಾಸಿಕ ದಿನ. ಚಂದ್ರಯಾನ-3 ಯೋಜನೆ ಯಶಸ್ಸಿಗೆ ಕಾರಣರಾದ ಇಸ್ರೊ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
‘ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲ ನೀಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ. ಇಂಥದೊಂದು ಅಸಾಧಾರಣ ಸಾಧನೆಗೈದ ನಾಡಿನ ವಿಜ್ಞಾನಿಗಳಿಗೆ ಅಭಿನಂದನೆಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಚಂದ್ರಯಾನ –3ರ ಯಶಸ್ಸು ಪ್ರತಿಯೊಬ್ಬ ಭಾರತೀಯನ ಸಾಮೂಹಿಕ ಯಶಸ್ಸು. 140 ಕೋಟಿ ಆಕಾಂಕ್ಷೆಗಳನ್ನು ಹೊಂದಿರುವ ಸಂಭ್ರಮದ ರಾಷ್ಟ್ರವು ತನ್ನ ಆರು ದಶಕಗಳ ಸುದೀರ್ಘ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇಂದು ಮತ್ತೊಂದು ಸಾಧನೆಗೆ ಸಾಕ್ಷಿಯಾಗಿದೆ. ನಮ್ಮ ವಿಜ್ಞಾನಿಗಳು, ಬಾಹ್ಯಾಕಾಶ ಎಂಜಿನಿಯರ್‌ಗಳು, ಸಂಶೋಧಕರು ಮತ್ತು ಈ ಕಾರ್ಯಾಚರಣೆಯನ್ನು ಭಾರತಕ್ಕೆ ವಿಜಯವಾಗಿಸುವಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರ ಗಮನಾರ್ಹ ಶ್ರಮ, ಅಪ್ರತಿಮ ಜಾಣ್ಮೆ ಮತ್ತು ಅಚಲವಾದ ಸಮರ್ಪಣೆಗೆ ನಾವು ಆಳವಾಗಿ ಋಣಿಯಾಗಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
‘ಮೈನವಿರೇಳಿಸುವ ಕ್ಷಣ... ಚಂದ್ರಯಾನ-3ರ ಯಶಸ್ವಿಯನ್ನು ವೀಕ್ಷಿಸಿ ಸಂಭ್ರಮಿಸಿದ ಅದ್ಭುತ ಕ್ಷಣ. ಇಂದು ರಾಜಸ್ಥಾನದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಚಂದ್ರಯಾನದ ಯಶಸ್ವಿ ಲ್ಯಾಂಡಿಗ್ ಪ್ರಕ್ರಿಯೆ ವೀಕ್ಷಿಸಿ ನಿಜಕ್ಕೂ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಇಸ್ರೊ ವಿಜ್ಞಾನಿಗಳ ನಿರಂತರ ಪರಿಶ್ರಮಕ್ಕೆ ಬಿಗ್ ಸೆಲ್ಯೂಟ್’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇದು ಎಲ್ಲಾ ಭಾರತೀಯರಿಗೆ ನಂಬಲಾಗದ ಹೆಮ್ಮೆಯ ಕ್ಷಣವಾಗಿದೆ! ಆರು ದಶಕಗಳ ಹಿಂದೆ ನೆಹರೂಜಿಯವರ ನೇತೃತ್ವದಲ್ಲಿ ಪ್ರಾರಂಭವಾದ ಪ್ರಯಾಣವು ಚಂದ್ರಯಾನ–3 ಮೂಲಕ ನಮ್ಮನ್ನು ಚಂದ್ರನತ್ತ ಕರೆತಂದಿದೆ! ವಿಜ್ಞಾನಿಗಳಿಗೆ, ಎಂಜಿನಿಯರ್‌ಗಳಿಗೆ, ಭರವಸೆಯ ದೃಷ್ಟಿಯಲ್ಲಿ ನಂಬಿಕೆ ಇಟ್ಟ ಎಲ್ಲರಿಗೂ ನಮಸ್ಕಾರ.... ಜೈ ಹಿಂದ್! ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ತಿಳಿಸಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡುವುದರೊಂದಿಗೆ ಭಾರತವು ಬಾಹ್ಯಾಕಾಶ ಪರಿಶೋಧನೆಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯವನ್ನು ನಿರ್ಮಿಸಿದೆ. ಇದು 1.4 ಶತಕೋಟಿ ಜನರಿಗೆ ಒಂದು ಹೆಗ್ಗುರುತು ಸಾಧನೆ ಮತ್ತು ಮಹತ್ವದ ಸಂದರ್ಭವಾಗಿದ್ದು, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ದೇಶವಾಗಿದೆ. ಈ ಯಶಸ್ಸು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪರಾಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
‘ಅಮೃತ ಕಾಲದಲ್ಲಿ ಕೋಟ್ಯಂತರ ಭಾರತೀಯರ ಕನಸು ನನಸಾದ ಕ್ಷಣ!, ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯಶಸ್ವಿಯಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತಿಹಾಸ ಬರೆದಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆ ಇಳಿಸಿದ ವಿಶ್ವದ ಮೊದಲ ದೇಶ ಈಗ ಭಾರತ . ನಮ್ಮೆಲ್ಲ ವಿಜ್ಞಾನಿಗಳಿಗೆ ಮತ್ತು ಇಸ್ರೊಗೆ ಅಭಿನಂದನೆಗಳು’ ಎಂದು ಬಿಜೆಪಿ ‘ಎಕ್ಸ್’ನಲ್ಲಿ ಬರೆದುಕೊಂಡಿದೆ.
‘ಇಂದಿನ ಅದ್ಭುತ ಸಾಧನೆಗಾಗಿ ಇಸ್ರೊ ತಂಡಕ್ಕೆ ಅಭಿನಂದನೆಗಳು. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ -3 ಸಾಫ್ಟ್ ಲ್ಯಾಂಡಿಂಗ್ ಮಾಡಿರುವುದು ನಮ್ಮ ವೈಜ್ಞಾನಿಕ ಸಮುದಾಯದ ದಶಕಗಳ ಜಾಣ್ಮೆ ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. 1962 ರಿಂದ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡುವುದನ್ನು ಮುಂದುವರೆಸಿದೆ. ಇದು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.